ಮಹಿಳೆಯರು ಸಬಲರಾದಾಗ ಮಾತ್ರ ಕುಟುಂಬ, ಸಮಾಜ ಹಾಗೂ ರಾಷ್ಟ್ರ ಮತ್ತಷ್ಟು ಸದೃಢವಾಗಿ ಬೆಳೆಯಲು ಸಾಧ್ಯ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಪುರುಷ–ಮಹಿಳೆ ಎಂಬ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಸಮಾನತೆಯ ದೃಷ್ಟಿಯಿಂದ ಕಾಣಬೇಕು. ಮಹಿಳೆಯರಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಅವರು ಜೀವನದ ಯಾವುದೇ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಬಲ್ಲರು ಎಂದು ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಹೇಳಿದರು.


ನಗರದ ಕಾರಂಜಿಮಠದಲ್ಲಿ ಸೆ. 7ರಂದು ಆಯೋಜಿಸಲಾಗಿದ್ದ ಮಹಿಳಾ ಸಮಾವೇಶ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಮುನ್ನಡೆಯಬೇಕು. ಶಿಕ್ಷಣ, ಉದ್ಯೋಗ, ಕಲೆ, ಸಾಹಿತ್ಯ, ಸಾಮಾಜಿಕ ಸೇವೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಕುಟುಂಬ ಮತ್ತು ಸಮಾಜದ ಬೆಂಬಲ ದೊರೆತರೆ ಸಾಧನೆಯ ಹಾದಿಯಲ್ಲಿ ಇನ್ನಷ್ಟು ದೂರ ಸಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ. ವಸಂತಗೀತಾ ಹಿರೇಮಠ ಅವರು, ಬಸವಾದಿ ಶಿವಶರಣರ ವಚನಗಳನ್ನು ಕೇವಲ ವರ್ತಮಾನದ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದಕ್ಕಿಂತ, ಅವುಗಳ ನಿಜವಾದ ಅಂತರಾರ್ಥವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಶರಣರ ವಚನಗಳು ಕೇವಲ ಧಾರ್ಮಿಕ ಅಥವಾ ಸಾಹಿತ್ಯಿಕ ಅಭಿವ್ಯಕ್ತಿಗಳಲ್ಲ; ಅವು ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಬದುಕಿನ ಮಾರ್ಗದರ್ಶಕ ತತ್ವಗಳಾಗಿವೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯೆ ಪ್ರೊ. ಪದ್ಮಾ ಕುಲಕರ್ಣಿ ಮಾತನಾಡಿ, ಮಹಿಳೆಯರಿಗೆ ಮನೆಯಿಂದಲೇ ಮುಕ್ತವಾದ ವಾತಾವರಣ ಮತ್ತು ಆತ್ಮವಿಶ್ವಾಸ ದೊರೆತರೆ ಅವರು ಸಮಾಜದಲ್ಲಿ ಯಾವುದೇ ಸಾಧನೆಯನ್ನು ಮಾಡಬಲ್ಲರು. ಮಹಿಳೆಯರ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಬದಲು ಅವರ ಪ್ರತಿಭೆ ಹಾಗೂ ಕನಸುಗಳಿಗೆ ಕುಟುಂಬವೇ ಮೊದಲ ವೇದಿಕೆಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಶೈಲಜಾ ಭಿಂಗೆಯ ಅವರ ಅಮೃತಾಭಿನಂದನಾ ಕಾರ್ಯಕ್ರಮವೂ ನಡೆಯಿತು. ಮಹಿಳಾ ಸಮಾಜದ ಸಂಘಟನೆ ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು.

ರಂಗಸಂಪದದ ಮೂಲಕ ಇತ್ತೀಚೆಗೆ ಬೆಳಗಾವಿಯಲ್ಲಿ ‘ನೀಲಾಂಬಿಕೆ’ ನಾಟಕ ಪ್ರದರ್ಶನಗೊಂಡಿತು. ಬೆಳಗಾವಿಯಲ್ಲಿ ರಂಗಸಂಪದದ ಮೂಲಕ ರಂಗಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುತ್ತಿರುವ ಡಾ. ಅರವಿಂದ ಕುಲಕರ್ಣಿ, ಪ್ರೊ. ಪದ್ಮಾ ಕುಲಕರ್ಣಿ, ಡಾ. ನಿರ್ಮಲಾ ಬಟ್ಟಲ, ಡಾ. ದುರ್ಗಾ ನಾಡಕರ್ಣಿ, ಶ್ರೀ ಆರ್.ಟಿ. ಶರಣ, ಶ್ರೀ ಪ್ರಸಾದ ಕಾರಜೋಳ ಹಾಗೂ ಕುಮಾರಿ ಸ್ನೇಹಾ ಕುಲಕರ್ಣಿ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.
ಶ್ರೀಮತಿ ಅಶ್ವಿನಿ ಅಸುಂಡಿ ಹಾಗೂ ಶ್ರೀಮತಿ ಜ್ಯೋತಿ ಬಿರಾದಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶ್ರೀ ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ನಯನಾ ಗಿರಿಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಧುರಿ ಉಪ್ಪಿನ ಸ್ವಾಗತಿಸಿದರು. ಡಾ. ಬಸವರಾಜ ಜಗದಂಪಿ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ನೀಲಗಂಗಾ ಚರಂತಿಮಠ, ರತ್ನಪ್ರಭಾ ಬೆಲ್ಲದ, ಶಿರೀಷ ಜೋಶಿ, ವಿ.ಕೆ. ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಗೂ ಮಹಿಳಾ ಸಮಾಜದ ಪದಾಧಿಕಾರಿಗಳು, ಸದಸ್ಯರು ಮತ್ತು ಸಾಹಿತ್ಯ–ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
