Belagavi

‘ಬೆಳಗಾವಿಯ ರಾಜನಿ’ಗೆ ಮಹಾನಗರದಲ್ಲಿ ಅದ್ಧೂರಿ ಸ್ವಾಗತ…

Share

ಸಂಸ್ಕೃತಿ ಮತ್ತು ಸಂಭ್ರಮದ ನಗರ ಬೆಳಗಾವಿಯಲ್ಲಿ ಗಣೇಶೋತ್ಸವದ ಸಡಗರ ಕಳೆಗಟ್ಟಿದೆ. ಭಕ್ತರ ಬಹುನಿರೀಕ್ಷಿತ ‘ಬೆಳಗಾವಿಯ ರಾಜಾ’ ವಿಘ್ನಹರ್ತನು ಭವ್ಯ ಮೆರವಣಿಗೆಯೊಂದಿಗೆ ನಗರಕ್ಕೆ ಆಗಮಿಸಿದ್ದು, ಇಡೀ ನಗರವೇ ಭಕ್ತಿ ಸಮುದ್ರದಲ್ಲಿ ಮಿಂದೇಳುತ್ತಿದೆ.

ಬೆಳಗಾವಿ ನಗರದಲ್ಲಿ ಗಣೇಶ ಮೂರ್ತಿಗಳ ಆಗಮನೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಸಾಂಪ್ರದಾಯಿಕ ವಾದ್ಯಗಳ ನಿನಾದದಲ್ಲಿ ‘ಬೆಳಗಾವಿಯ ರಾಜ’ನ ಆಗಮನ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ನಗರದ ಪ್ರಮುಖ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ್ ವೃತ್ತದಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ , ಡಿಸಿಪಿ ನಾರಾಯಣ ಬರಮನಿ, ವಿಜಯ್ ಜಾಧವ್ , ಎಸಿಪಿ ಸಂತೋಷ ಸತ್ಯನಾಯಕ್, ಖಡೇಬಝಾರ್ ಎಸಿಪಿ, ಸಿಪಿಐ , ಸಿಪಿಐ ಜೆ ಎಂ ಕಾಲಿಮಿರ್ಚಿ, ವಿಕಾಸ್ ಕಲಘಟಗಿ, ಮುರುಘೇಂದ್ರಗೌಡ ಪಾಟೀಲ್, ಸುನೀಲ್ ಜಾಧವ್, ಶ್ರೀನಾಥ್ ಪವಾರ್ ಸೇರಿದಂತೆ ಗಣ್ಯರಿಂದ ವಿಧಿಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು.

ಪೀರನವಾಡಿಯ ಜನಪ್ರಿಯ ಮೂರ್ತಿಕಾರ ರವಿ ಲೋಹಾರ್ ಅವರು ಸಾಕಾರಗೊಳಿಸಿರುವ ಸುಮಾರು 20 ಅಡಿ ಎತ್ತರದ ಚತುರ್ಭುಜ ಗಜಾನನನ ಈ ಭವ್ಯ ಮೂರ್ತಿಯು ಕಣ್ಮನ ಸೆಳೆಯುವಂತಿದೆ. ಪೂಜೆಯ ಬಳಿಕ ಆರಂಭವಾದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಯುವ ಢೋಲ್ ತಾಶಾ ತಂಡಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಭಕ್ತರು ಮೈಮರೆತು ನಲಿದರು.

ರಸ್ತೆಯಿಡೀ ಜಮಾಯಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಗಣೇಶನ ದರ್ಶನ ಪಡೆದು ಪುನೀತರಾದರು.ಮಹಿಳೆಯರು, ಯುವಕರು ಹಾಗೂ ಹಿರಿಯ ನಾಗರಿಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ‘ಗಣಪತಿ ಬಾಪ್ಪಾ ಮೋರಯಾ’ ಎನ್ನುವ ಜಯಘೋಷ ಮೊಳಗಿಸಿದರು.
ಮೆರವಣಿಗೆಯೂ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಿಂದ ಆರಂಭಗೊಂಡು ಕಾಲೇಜ್ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಕೋರ್ಟ್ ರಸ್ತೆ ಮಾರ್ಗವಾಗಿ ಚವ್ಹಾಟ್ ಗಲ್ಲಿಗೆ ತಲುಪಿತು. ಮಹಾನಗರ ಮೊದಲ ಗಣಪನನ್ನು ನಗರದ ಜನತೆಯೂ ಅತ್ಯುತ್ಸಾಹದಿಂದ ಸ್ವಾಗತಿಸಿದರು. ನೆರೆದಿದ್ದ ಪ್ರತಿಯೊಬ್ಬರು ತಮ್ಮ ಮೊಬೈಲ್’ಗಳಲ್ಲಿ ಬೆಳಗಾವಿಯ ರಾಜನ ಆಗಮನೋತ್ಸವದ ದೃಶ್ಯಗಳನ್ನು ತಮ್ಮ ಮೊಬೈಲ್’ನಲ್ಲಿ ಸೆರೆಹಿಡಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಒಟ್ಟಾರೆಯಾಗಿ ‘ಬೆಳಗಾವಿಯ ರಾಜ’ನ ಆಗಮನವು ಮುಂಬರುವ ಹಬ್ಬದ ಸಡಗರವನ್ನು ದುಪ್ಪಟ್ಟುಗೊಳಿಸಿದೆ.

Tags:

error: Content is protected !!