Belagavi

ಮುರಗೋಡದ 100 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಮಾಜಿ ಶಾಸಕ ವಿ.ಐ.ಪಾಟೀಲ್

Share

ಸವದತ್ತಿ ತಾಲೂಕಿನ ಮುರುಗೋಡದಲ್ಲಿ ನೂರು ಎಕರೆ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಹಾಗೂ ಅವರಿಗೆ ಬೆಂಬಲ ನಿಂತಿರುವ ಶಾಸಕ‌ ಮಹಾಂತೇಶ ಕೌಜಲಗಿಗೆ ಮೇಲೂ ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ ಡಾ. ವಿ.ಐ.ಪಾಟೀಲ್ ಒತ್ತಾಯಿಸಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುರಗೋಡದಲ್ಲಿ ಗ್ರಾಮದ ಸರಹದ್ದಿನ ಸರ್ಕಾರಿ ಜಮೀನಿನಲ್ಲಿ ನೀಲಗಿರಿ ಮರಗಳನ್ನು ಕಡಿದು ಸಾಗಣೆ ಮಾಡಿರುವುದಲ್ಲದೆ, ಕಲ್ಲು, ಮಣ್ಣು ಹಾಗೂ ಗರಸುಗಳನ್ನು ಅಕ್ರಮವಾಗಿ ಹೊರ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುರಗೋಡ ಗ್ರಾಮದ ಸರ್ವೆ ನಂ.613ರ 46 ಎಕರೆ ಹಾಗೂ ಸರ್ವೆ ನಂ.855ರ 11 ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಕುರಿತು 2024ರ ಜುಲೈ 22ರಂದು ತಹಶೀಲ್ದಾರ್ ಹಾಗೂ ಮುರಗೋಡ ಪೊಲೀಸ್ ಠಾಣೆಯ ಸಿಪಿಐಗೆ ದೂರು ಸಲ್ಲಿಸಲಾಗಿತ್ತು. ಮರುದಿನವೇ ಕಂದಾಯ, ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಸರ್ವೆ ನಂ.613 ಮತ್ತು 855ರ ಪ್ರದೇಶದಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಕಡಿದು ಲಾರಿ ಮೂಲಕ ಸಾಗಿಸಲಾಗಿದೆ. ಈ ಸಂಬಂಧ ಲಾರಿ ಸಂಖ್ಯೆ ಕೆಎ-22-ಎ-9607 ಸೇರಿದಂತೆ ಹಲವು ವಾಹನಗಳ ಮಾಹಿತಿ ಹಾಗೂ ಜಿಪಿಎಸ್ ಛಾಯಾಚಿತ್ರಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಆದರೆ, ದೂರು ಸಲ್ಲಿಸಿ ಎರಡು ವರ್ಷ ಕಳೆದರೂ ಪ್ರಕರಣದಲ್ಲಿ ನಿರೀಕ್ಷಿತ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸರ್ಕಾರಿ ಜಮೀನಿನಲ್ಲಿರುವ ಕಲ್ಲು, ಮಣ್ಣು ಹಾಗೂ ಗರಸನ್ನು ಭಾರಿ ಪ್ರಮಾಣದಲ್ಲಿ ಹೊರತೆಗೆದು ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ದಿನಕ್ಕೆ ನೂರಾರು ಲಾರಿಗಳಲ್ಲಿ ಖನಿಜ ಸಂಪತ್ತು ಸಾಗಿಸಲಾಗುತ್ತಿದೆ ಎಂದರು.
ಹಲಕಿ ಗ್ರಾಮದ ಸಮೀಪದ ಎಂ-ಸ್ಯಾಂಡ್ ಘಟಕಗಳ ಸುತ್ತಮುತ್ತ ಹಾಗೂ ರಾಮಾಪುರ ರಸ್ತೆಯ ಬದಿಯ ಸರ್ಕಾರಿ ಗಾಯರಾಣ ಜಮೀನಿನಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶಗಳಿಂದಲೂ ಕಲ್ಲು ಸಾಗಿಸಲಾಗುತ್ತಿದೆ ಎಂದರು.

Tags:

error: Content is protected !!