ಗಣೇಶೋತ್ಸವದ ಸಂಭ್ರಮದಲ್ಲಿದ್ದ ಧಮೋನೆ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದ ಚವಾಟಗಲ್ಲಿಯ ಢೋರ್ ಗಲ್ಲಿ ದುರಂತಕ್ಕೆ ಇದೀಗ ಹೊಸ ಹಾಗೂ ಅಚ್ಚರಿಯ ತಿರುವು ಸಿಕ್ಕಿದೆ. ಫ್ರಿಡ್ಜ್ ಸ್ಫೋಟ ಎಂದು ನಂಬಲಾಗಿದ್ದ ಈ ಪ್ರಕರಣದಲ್ಲಿ, ಸ್ಫೋಟಕ್ಕೂ ಮುನ್ನ ಅಪರಿಚಿತ ವ್ಯಕ್ತಿಯೊಬ್ಬ ಬಕೆಟ್ ಹಿಡಿದು ಬಂದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರೀ ಅನುಮಾನಗಳಿಗೆ ಕಾರಣವಾಗಿದೆ.

ಬೆಳಗಾವಿಯ ಚವಾಟಗಲ್ಲಿಯ ಡೋರಗಲ್ಲಿಯಲ್ಲಿ ಸೆಪ್ಟೆಂಬರ್ 14ರ ತಡರಾತ್ರಿ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ಶಾರದಾ, ಭಾರತಿ, ಪ್ರಿಯಾ, ಗಂಗಾ, ಗಜಾನನ ಹಾಗೂ ರೋಷನ್ ಸೇರಿದಂತೆ ಒಟ್ಟು ಆರು ಮಂದಿ ಜೀವ ಕಳೆದುಕೊಂಡಿದ್ದರು. ಆರಂಭದಲ್ಲಿ ಫ್ರಿಡ್ಜ್ ಸ್ಫೋಟದಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಘಟನೆ ನಡೆದು ಏಳು ದಿನಗಳ ಬಳಿಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣದ ದಿಕ್ಕನ್ನೇ ಬದಲಿಸುವ ಮಹತ್ವದ ಸುಳಿವು ಸಿಕ್ಕಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸ್ಫೋಟಕ್ಕೂ ಮುನ್ನ ಅಪರಿಚಿತ ವ್ಯಕ್ತಿಯೊಬ್ಬ ಕೈಯಲ್ಲಿ ಬಕೆಟ್ ಹಿಡಿದುಕೊಂಡು ಧಮೋನೆ ಕುಟುಂಬದ ಶೆಡ್ ಬಳಿ ಬಂದಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಆ ವ್ಯಕ್ತಿ ಅಲ್ಲಿ ಕೆಲವು ನಿಮಿಷಗಳ ಕಾಲ ಇದ್ದು, ನಂತರ ಖಾಲಿ ಕೈಯಲ್ಲಿ ವೇಗವಾಗಿ ಓಡಿ ಹೋಗಿರುವುದು ಕಂಡುಬಂದಿದೆ. ಬಕೆಟ್ನಲ್ಲಿ ಆತ ತಂದಿದ್ದ ವಸ್ತುವೇನು? ಈ ದುರಂತಕ್ಕೂ ಆಗಂತುಕ ವ್ಯಕ್ತಿಗೂ ನೇರ ಸಂಬಂಧವಿದೆಯೇ? ಅಥವಾ ಇದು ವ್ಯವಸ್ಥಿತ ಸಂಚಾ ಎಂಬೆಲ್ಲಾ ಗಂಭೀರ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.
