Belagavi

ಬೆಳಗಾವಿ ಬ್ರಹ್ಮಕುಮಾರೀಸ್ ಮುಖ್ಯ ಕೇಂದ್ರದಲ್ಲಿ ಶಿಕ್ಷಕರ‌ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ

Share

ಶಿಕ್ಷಕರ‌ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೆಳಗಾವಿ ಮಹಾಂತೇಷ ನಗರದ ಬ್ರಹ್ಮಕುಮಾರೀಸ್ ಮುಖ್ಯ ಕೇಂದ್ರದಲ್ಲಿ ಭಕ್ತಿ, ಜ್ಞಾನ ಹಾಗೂ ಸಾಂಸ್ಕೃತಿಕ ವೈಭವದ ಸಂಗಮ ನಡೆಯಿತು.

ಬೆಳಿಗ್ಗೆ 7ಕ್ಕೆ ಬಾಬಾ ಮುರುಳಿ ನಡೆದ ಬಳಿಕ, 8ಕ್ಕೆ ಕಾರ್ಯಕ್ರಮ ಆರಂಭವಾಯಿತು. ಬ್ರಹ್ಮಕುಮಾರೀಸ್ ಪ್ರಾದೇಶಿಕ ಮುಖ್ಯಸ್ಥರಾದ ರಾಜಯೋಗಿನಿ ಆದರಣೀಯ ಅಂಬಿಕಾ ಅಕ್ಕನವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಸಮಾಜ ಕಟ್ಟಿ ಬೆಳೆಸುವಲ್ಲಿ ಶಿಕ್ಷಕರ ಮಹತ್ವ ಮತ್ತು ಜಗತ್ತಿನ ಒಡೆಯ ಶ್ರೀಕೃಷ್ಣನ ಆದರ್ಶಗಳ ಬಗ್ಗೆ ವಿವರವಾಗಿ ಮಾತನಾಡಿದರು.

ರಾಜಯೋಗಿನಿ ಆದರಣೀಯ ಅಂಬಿಕಾ ಅಕ್ಕನವರ ವಿಶೇಷ ಸಂದೇಶ:
ಕಾರ್ಯಕ್ರಮದ ಉದ್ಘಾಟನೆಯ ನಂತರ ಅಂಬಿಕಾ ಅಕ್ಕನವರು ಮಾತನಾಡುತ್ತಾ, ಶಿಕ್ಷಕರು ಬರೀ ಪಾಠ ಹೇಳುವವರಲ್ಲ, ಅವರು ಸಮಾಜದ ಅಡಿಪಾಯವನ್ನು ಕಟ್ಟುವ ನಿಜವಾದ ನಿರ್ಮಾತೃಗಳು. ಶ್ರೀಕೃಷ್ಣ ನ ಜೀವನವು ನಮಗೆ ನಿಷ್ಠೆ, ನ್ಯಾಯ, ನಿಸ್ವಾರ್ಥ ಸೇವೆ ಮತ್ತು ಪ್ರೇಮದ ಆದರ್ಶಗಳನ್ನು ಕಲಿಸುತ್ತದೆ. ಇಂದಿನ ಯುವ ಜನಾಂಗಕ್ಕೆ ಶಿಕ್ಷಕರ ಮಾರ್ಗದರ್ಶನ ಮತ್ತು ಕೃಷ್ಣನ ಬೋಧನೆಗಳು ಎರಡೂ ಅಗತ್ಯ. ಶಿಕ್ಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಿದಾಗ, ಆ ಮಕ್ಕಳು ಸಮಾಜವನ್ನು ಬೆಳಗಿಸುತ್ತಾರೆ. ಶ್ರೀಕೃಷ್ಣನು ತನ್ನ ಜೀವನದಲ್ಲಿ ಪ್ರತಿ ಕ್ಷಣವನ್ನೂ ಧರ್ಮ, ಕರ್ತವ್ಯ ಮತ್ತು ಪ್ರೇಮದಿಂದ ತುಂಬಿದ್ದನು. ಅದೇ ರೀತಿ ಶಿಕ್ಷಕರು ತಮ್ಮ ಜ್ಞಾನದ ಬೆಳಕಿನಿಂದ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಬೇಕು. ಈಶ್ವರೀಯ ಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಿದಾಗ, ಅದು ಕೇವಲ ವಿದ್ಯೆಯಲ್ಲ, ಅದು ಆತ್ಮೋನ್ನತಿಯ ದಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕನೂ ತನ್ನನ್ನು ತಾನು ಮೊದಲು ಪರಿವರ್ತಿಸಿಕೊಂಡು, ನಂತರ ಸಮಾಜಕ್ಕೆ ಮಾದರಿಯಾಗಬೇಕು. ಈ ದಿನ ನಾವು ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಕೇವಲ ಗೌರವಕ್ಕಾಗಿ ಅಲ್ಲ, ಅವರ ತ್ಯಾಗ, ಶ್ರಮ ಮತ್ತು ಪ್ರೀತಿಯನ್ನು ನೆನಪಿಸಿಕೊಳ್ಳಲು. ಶ್ರೀಕೃಷ್ಣನ ಆದರ್ಶಗಳನ್ನು ಅನುಸರಿಸಿ, ನಾವು ಪ್ರತಿಯೊಬ್ಬರೂ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸೋಣ” ಎಂದು ಅಕ್ಕನವರು ಭಾವಪೂರ್ಣವಾಗಿ ತಿಳಿಸಿದರು.

ಶಿಕ್ಷಕರಿಗೆ ಸನ್ಮಾನ:_ ಈಶ್ವರೀಯ ವಿಶ್ವವಿದ್ಯಾಲಯದ ಗುರುಮಾತೆಯರಿಗೆ ಹಾಗೂ ನಗರದ ಇತರ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. “ಶಿಕ್ಷಕರೇ ನಿಜವಾದ ದೇಶ ನಿರ್ಮಾತೃಗಳು” ಎಂಬ ಧ್ಯೇಯದೊಂದಿಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.

ಜನ್ಮಾಷ್ಠಮಿ ವಿಶೇಷ: ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರುಕ್ಮಿಣಿ ವೇಷಧಾರಿಗಳಾಗಿ ನೃತ್ಯ ಹಾಗೂ ಗಾಯನ ನಡೆಸಿಕೊಟ್ಟರು. ಕುಮಾರಿ ಮಾಧುರಿ ಯಲಿಗಾರ, ಶಿವಾಂಚಲಾ ಕಬಾಡಗಿ, ಶ್ರೇಯಾ ತಿಳಿಗಂಜಿ, ಆಧ್ಯಾ ತಿಳಿಗಂಜಿ, ಸಾಕ್ಷಿ ಕೋಲಕಾರ, ಆಧಿತಿ ಮಹಿತಾ ಮುಂತಾದವರು ನೃತ್ಯದ ಮೂಲಕ ಗಮನ ಸೆಳೆದರು. ಭಜನೆ, ಕೃಷ್ಣ ಲೀಲೆ ನೃತ್ಯ, ರಾಸ್-ಲೀಲೆ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು. ಕೊನೆಯಲ್ಲಿ ಹಿರಿಯರಿಂದ ಸಂತಸದ ಕೃಷ್ಣರಾಸ ಮೂಡಿಬಂತು.

ಉಪಸ್ಥಿತರು: ಕಾರ್ಯಕ್ರಮದಲ್ಲಿ ಅಕ್ಕಂದಿರಾದ ದೇವಿಕಾ, ಪ್ರತಿಭಾ, ಮಂಜುಳಾ, ಈರಮ್ಮ, ಮೋಹಿನಿ, ಡಾ. ಸಂಗೀತಾ ಬೆಳಗಾವಿಮಠ, ಸಹೋದರರಾದ ರಾಜ ಯೋಗಿ ಗುರುರಾಜ್ ಕಾಮತ್, ಶ್ರೀಕಾಂತ್, ರಾಜಶೇಖರ ತಡಸಲೂರು, ಯೊಗೇಶ ಮೂಲಿಮನಿ ಜಗದೀಶ್ ಹರೀಶ್ ಭೀಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ವೈಭವ: ಬ್ರಹ್ಮಕುಮಾರೀಸ್ ಯುವ ವಿಭಾಗದ ವತಿಯಿಂದ “ಗೀತಾ ಸಂದೇಶ” ನಾಟಕ, ಶ್ರೀಕೃಷ್ಣನ ಬೋಧನೆಗಳ ಕುರಿತ ಚಿಂತನ-ಮಂಥನ, ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡರು.

“ಜ್ಞಾನದ ಬೆಳಕು, ಭಕ್ತಿಯ ಶಕ್ತಿ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು

Tags:

error: Content is protected !!