ರಾಜ್ಯ ಸರ್ಕಾರ ಸಂಪೂರ್ಣವಾಗಿ ಹಳಿತಪ್ಪಿದ್ದು, ಬೆಳಗಾವಿ ನಗರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಸರ್ಕಾರ ಆರ್ಥಿಕ ಹಾಗೂ ಮಾನಸಿಕವಾಗಿಯೂ ದಿವಾಳಿಯಾಗಿದೆ. ರಾಜ್ಯ ಸರ್ಕಾರದ ಎಕ್ಸಪೈರಿ ಸಮೀಪಿಸುತ್ತಿದೆ ಎಂದು ಲೇವಡಿ ಮಾಡಿದರು.

ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಟ್ಟ ಶಾಸಕ ಅಭಯ ಪಾಟೀಲ, ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಲು ತಕ್ಷಣವೇ ₹50,000 ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಕಳೆದ ಮೂರು ವರ್ಷಗಳಿಂದ ನಗರಕ್ಕೆ ಒಂದೇ ಒಂದು ಪೈಸೆ ವಿಶೇಷ ಅಭಿವೃದ್ಧಿ ಅನುದಾನ ಬಂದಿಲ್ಲ. ಹಿಂದೆ ಪ್ರತಿ ವರ್ಷ ನಗರ ಅಭಿವೃದ್ಧಿಗೆ ₹100 ಕೋಟಿ ಹಾಗೂ ಅಧಿವೇಶನದ ಸಮಯದಲ್ಲಿ ₹20–25 ಕೋಟಿ ಮೂಲಭೂತ ಸೌಕರ್ಯಗಳಿಗೆ ಸಿಗುತ್ತಿತ್ತು. ಆದರೆ ಪ್ರಸ್ತುತ ಬೆಳಗಾವಿ ಮಹಾನಗರ ಪಾಲಿಕೆಗೆ ಬರಬೇಕಾದ ಅರ್ಧಕ್ಕಿಂತ ಹೆಚ್ಚು ಅನುದಾನವನ್ನು ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿದರು.
ಇದಲ್ಲದೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ಹಿಂದೆ ಅನುಮೋದನೆಯಾಗಿದ್ದ 1,400 ಮನೆಗಳ ಪೈಕಿ 1,000 ಮನೆಗಳನ್ನು ಹಾಲಿ ಸರ್ಕಾರ ರದ್ದುಗೊಳಿಸಿದೆ ಎಂದು ದೂರಿದರು. ಗಣೇಶೋತ್ಸವ ಹತ್ತಿರ ಬರುತ್ತಿದ್ದರೂ ನಗರದ ರಸ್ತೆಗಳ ತಗ್ಗು-ಗುಂಡಿ ಮುಚ್ಚಲು ಮಹಾಪಾಲಿಕೆಗೆ ಅನುದಾನ ನೀಡುತ್ತಿಲ್ಲ. ಮಂತ್ರಿಮಂಡಲ ರಚನೆಯಾಗಿ ಇಷ್ಟೊಂದು ದಿನಗಳಾದರೂ ಆಡಳಿತ ಶೈಲಿ ಸಂಪೂರ್ಣ ಕುಸಿದಿದ್ದು, ಯಾವುದೇ ಸೂಕ್ತ ಕೆಲಸಗಳು ನಡೆಯುತ್ತಿಲ್ಲ. ಇಷ್ಟು ದಿನ ಆರ್ಥಿಕವಾಗಿ ದಿವಾಳಿಯಾಗಿದ್ದ ಸರ್ಕಾರ ಈಗ ಮಾನಸಿಕವಾಗಿ ದಿವಾಳಿಯಾಗಿದ್ದು, ಅದನ್ನು ರಿಪೇರಿ ಮಾಡಲೂ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿಯೇ ಕಾಂಗ್ರೆಸ್ ಮಹಾ ದಿವಾಳಿಯಾಗಿದೆ. ಇಂತಹ ಆಡಳಿತ ವೈಫಲ್ಯ ಹೊಂದಿರುವ ಸರ್ಕಾರ ಶೀಘ್ರದಲ್ಲೇ ತೊಲಗಬೇಕು. ಬಿಜೆಪಿಯಲ್ಲ ಜನರೇ ಈ ಸರ್ಕಾರದ ಅವಧಿ ಮುಗಿಸಲಿದ್ದು, ಎಕ್ಸಪೈರಿ ಸಮೀಪಿಸುತ್ತಿದೆ ಎಂದು ಕಿಡಿಕಾರಿದರು.
ಈ ವೇಳೆ ಎಂ.ಎಲ್.ಸಿ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ್ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
