Belagavi

ಸರ್ದಾರ್ ಪ್ರೌಢಶಾಲೆಯಲ್ಲಿ ರಾಜ್ಯದಲ್ಲೇ ಮೊದಲ ರೋಬೋಟಿಕ್ ಲ್ಯಾಬ್…

Share

ಕರ್ನಾಟಕ ಸರ್ಕಾರದ ಜಿಲ್ಲಾ ಪಂಚಾಯತ್ ಬೆಳಗಾವಿ ವತಿಯಿಂದ ಕಾಕತಿವೇಸ್‌ನ ಕರ್ನಾಟಕ ಪಬ್ಲಿಕ್ ಶಾಲೆ (ಸರ್ದಾರ್ ಪ್ರೌಢಶಾಲೆ) ಆವರಣದಲ್ಲಿ ನೂತನ ಕೊಠಡಿಗಳು ಹಾಗೂ ಅತ್ಯಾಧುನಿಕ ಲ್ಯಾಬ್‌ಗಳ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ಲೋಕೋಪಯೋಗಿ ಸಚಿವರ ವಿಶೇಷ ಪ್ರಯತ್ನ ಹಾಗೂ ಶಾಸಕರ ಶೈಕ್ಷಣಿಕ ಕಾಳಜಿಯಿಂದ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸಮಾನವಾಗಿ ರೂಪಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗಿದೆ.


ಕರ್ನಾಟಕ ಸರ್ಕಾರದ ಜಿಲ್ಲಾ ಪಂಚಾಯತ್ ಬೆಳಗಾವಿ ವತಿಯಿಂದ ಕಾಕತಿವೇಸ್‌ನ ಕರ್ನಾಟಕ ಪಬ್ಲಿಕ್ ಶಾಲೆ (ಸರ್ದಾರ್ ಪ್ರೌಢಶಾಲೆ) ಆವರಣದಲ್ಲಿ ನೂತನ ಕೊಠಡಿಗಳು ಹಾಗೂ ಲ್ಯಾಬ್‌ಗಳ ಭೂಮಿ ಪೂಜೆ ಮತ್ತು ಉದ್ಘಾಟನಾ ಸಮಾರಂಭವು ನಡೆಯಿತು. ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಂಜೂರಾದ 5 ಕೋಟಿ ರೂಪಾಯಿ ವೆಚ್ಚದ ನೂತನ ಕೊಠಡಿಗಳ ಭೂಮಿ ಪೂಜೆ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಆಸೀಫ್ ಸೇಠ್ ಅವರ ಶೈಕ್ಷಣಿಕ ಕಾಳಜಿಯಿಂದ ಸ್ಮಾರ್ಟ್ ಸಿಟಿ ಬೆಳಗಾವಿ ವತಿಯಿಂದ 3.04 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರೋಬೋಟಿಕ್, ಲ್ಯಾಂಗ್ವೇಜ್ ಮತ್ತು ವರ್ಚುವಲ್ ಲ್ಯಾಬ್‌ಗಳ ಉದ್ಘಾಟನೆಯನ್ನು ಶಾಸಕ ಆಸೀಫ್ ಸೇಠ್, ಉಪಮಹಾಪೌರ ಹನುಮಂತ ಕೊಂಗಾಲಿ ಮತ್ತು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ನೆರವೇರಿಸಿದರು.


ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಶಾಲೆ ಹಾಗೂ ಕಾಲೇಜು ಹಂತದಲ್ಲೇ ಮಕ್ಕಳಿಗೆ ಅತ್ಯಾಧುನಿಕ ಮೂಲಭೂತ ಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರ್ಕಿಹೊಳಿ ಅವರ ಅನುದಾನದಿಂದ ಸರ್ದಾರ್ ಹೈಸ್ಕೂಲ್‌ನಲ್ಲಿ ₹5 ಕೋಟಿ ವೆಚ್ಚದಲ್ಲಿ 16 ಹೊಸ ತರಗತಿ ಕೊಠಡಿಗಳ ನಿರ್ಮಾಣ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ₹3 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ವರ್ಚುವಲ್ ತರಗತಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಸರ್ದಾರ್ ಹೈಸ್ಕೂಲ್ ಮತ್ತು ರಾಮತೀರ್ಥನಗರ ಶಾಲೆಗಳಲ್ಲಿ ಈ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಸರಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಮಾನವಾಗಿ ರೂಪಿಸುವ ನಿಟ್ಟಿನಲ್ಲಿ ಉತ್ತಮ ಶಿಕ್ಷಕರು ಮತ್ತು ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ಸ್ ತಂತ್ರಜ್ಞಾನದ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಲ್ಯಾಬ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಮಕ್ಕಳು ಡ್ರ್ಯಾಗ್ ಅಂಡ್ ಡ್ರಾಪ್ ವಿಧಾನದ ಮೂಲಕ ಕೋಡಿಂಗ್ ಕಲಿತು, ಸುಲಭವಾಗಿ ರೋಬೋಟ್‌ಗಳನ್ನು ನಿರ್ಮಿಸಬಹುದಾಗಿದೆ. ಇದರೊಂದಿಗೆ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ 3D ಮತ್ತು ವರ್ಚುವಲ್ ರಿಯಾಲಿಟಿ (VR) ಮುಖಾಂತರ ಪಾಠಗಳನ್ನು ಅರ್ಥಮಾಡಿಕೊಳ್ಳಲು ‘ಇಮ್ಮರ್ಸಿವ್ ಲರ್ನಿಂಗ್ ಲ್ಯಾಬ್’ ಅನ್ನು ಸಹ ಸಿದ್ಧಪಡಿಸಲಾಗಿದೆ. ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ ಸಂಸ್ಥೆಯ ಸಾಫ್ಟ್‌ವೇರ್ ಪ್ರಾಜೆಕ್ಟ್ ಎಂಜಿನಿಯರ್ ಸಯ್ಯದ್ ಶರೀಫ್ ಅಹ್ಮದ್ ಅವರು ಈ ಅತ್ಯಾಧುನಿಕ ತಂತ್ರಜ್ಞಾನ ಪ್ರಯೋಗಾಲಯಗಳ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಈ ವೇಳೆ ನಗರಸೇವಕರು, ಬಿಇಓ ಲೀಲಾವತಿ ಹಿರೇಮಠ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.

Tags:

error: Content is protected !!