ಬೆಳಗಾವಿ ತಾಲೂಕಿನ ಮಚ್ಚೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಬಸ್ ಸೌಕರ್ಯವಿಲ್ಲದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಹನುಮಣ್ಣನವರ್ ಅವರಿಗೆ ಮನವಿ ಸಲ್ಲಿಸಿದ್ದು, ಸಾರಿಗೆ ಸಂಸ್ಥೆ ನೀಡಿದ ಭರವಸೆ ಈಡೇರುತ್ತದೆಯೇ ಎಂದು ಕಾದು ನೋಡಬೇಕಿದೆ.

ಬೆಳಗಾವಿಯ ಪ್ರಮುಖ ಪಟ್ಟಣ ಪಂಚಾಯಿತಿಯಾಗಿರುವ ಮಚ್ಚೆ ಗ್ರಾಮದಲ್ಲಿ ಸುಮಾರು 15 ರಿಂದ 20 ಸಾವಿರ ಜನಸಂಖ್ಯೆಯಿದ್ದು, ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ರೈತರು ಹಾಗೂ ಕೈಗಾರಿಕಾ ಕಾರ್ಮಿಕರು ನಗರಕ್ಕೆ ಪ್ರಯಾಣಿಸುತ್ತಾರೆ. ನಂದಹಳ್ಳಿ, ವಾಗಡೇ ಮತ್ತು ಖಾನಾಪುರ ಭಾಗಕ್ಕೆ ತೆರಳುವ ಬಸ್ಗಳು ಇದೇ ರಸ್ತೆಯಲ್ಲಿ ಸಂಚರಿಸಿದರೂ, ಮಚ್ಚೆ ಗ್ರಾಮದಲ್ಲಿ ಬಸ್ಗಳನ್ನು ಸರಿಯಾಗಿ ನಿಲ್ಲಿಸುತ್ತಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂಕ್ತ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಅನಿವಾರ್ಯವಾಗಿ ಆಟೋ ಹಾಗೂ ಟೆಂಪೋಗಳನ್ನು ಅವಲಂಬಿಸುವಂತಾಗಿದ್ದು, ಇತ್ತೀಚೆಗೆ ಬಸ್ ಹತ್ತುವ ರಶ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ಜಾರಿ ಬಿದ್ದು ಗಾಯಗೊಂಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆಯ ಗಂಭೀರತೆಯನ್ನು ಮನಗಂಡು ಸಾರ್ವಜನಿಕರು ಮತ್ತು ವಿದ್ಯಾರ್ಥಿನಿಯರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಉಪಾಧ್ಯಕ್ಷರಾದ ಸುನಿಲ್ ಹನುಮಣ್ಣನವರ್ ಅವರನ್ನು ಭೇಟಿಯಾಗಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಉಪಾಧ್ಯಕ್ಷರು ಮುಂಬರುವ ಸೋಮವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
