ಬೆಳಗಾವಿಯಲ್ಲಿ ರಕ್ಷಾ ಬಂಧನದ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಗಳು ಬಣ್ಣ ಬಣ್ಣದ ಆಕರ್ಷಕ ರಾಕಿಗಳಿಂದ ಕಂಗೊಳಿಸುತ್ತಿವೆ. ಪಾಂಗುಳು ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ರಾಕಿ ಖರೀದಿಸಲು ಮಹಿಳೆಯರು ಮತ್ತು ಯುವತಿಯರ ದಂಡೇ ಹರಿದು ಬರುತ್ತಿದೆ.


ಸಹೋದರ-ಸಹೋದರಿಯರ ಪವಿತ್ರ ಪ್ರೀತಿಯ ಪ್ರತೀಕವಾದ ರಕ್ಷಾ ಬಂಧನ ಹತ್ತಿರ ಬರುತ್ತಿದ್ದಂತೆ, ಸಾಂಸ್ಕೃತಿಕ ನಗರಿ ಬೆಳಗಾವಿಯ ಮಾರುಕಟ್ಟೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿಶೇಷವಾಗಿ ಪಾಂಗುಳ ಗಲ್ಲಿ ಮತ್ತು ಶಹಾಪುರ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಕಿ ಖರೀದಿಸಲು ಮಹಿಳೆಯರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಅಂಗಡಿಗಳಲ್ಲಿ ವಿವಿಧ ನಮೂನೆಯ ರಾಕಿಗಳು ಕಣ್ಣಿಗೆ ರಾಚುತ್ತಿದ್ದು, ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಬಾರಿ ಮಾರುಕಟ್ಟೆಯಲ್ಲಿ ವಿಶೇಷ ಆಕರ್ಷಣೆಯಾಗಿ ಪುಟ್ಟ ಮಕ್ಕಳನ್ನು ಸೆಳೆಯುವ ಲೈಟಿಂಗ್ ರಾಕಿಗಳು ಹಾಗೂ ಕಾರ್ಟೂನ್ ಪಾತ್ರಗಳ ರಾಕಿಗಳು ಭಾರೀ ಬೇಡಿಕೆಯಲ್ಲಿವೆ. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ರುದ್ರಾಕ್ಷಿ ರಾಕಿಗಳು, ಜರ್ಕನ್ ಹಾಗೂ ಮುತ್ತುಗಳಿಂದ ಅಲಂಕರಿಸಿದ ಆಕರ್ಷಕ ರಕ್ಷೆಗಳು ಗ್ರಾಹಕರ ಮನಸ್ಸನ್ನು ಸೆಳೆಯುತ್ತಿವೆ. ವ್ಯಾಪಾರಿಗಳು ಸಹ ವಿವಿಧ ಶೈಲಿಯ ನವೀನ ರಾಕಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಖರೀದಿದಾರರ ದಂಡು ಹರಿದು ಬರುತ್ತಿದೆ.
ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ರಾಕಿಗಳು ಲಭ್ಯವಿದ್ದು, ಕೇವಲ 10 ರೂಪಾಯಿಯಿಂದ ಪ್ರಾರಂಭವಾಗಿ ಬ್ರಾಂಡ್ ಹಾಗೂ ವಿನ್ಯಾಸಕ್ಕೆ ತಕ್ಕಂತೆ 500 ರೂಪಾಯಿವರೆಗಿನ ವೈವಿಧ್ಯಮಯ ರಾಕಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಉತ್ಸಾಹಕ್ಕೇನು ಕಡಿಮೆ ಆಗಿಲ್ಲದೆ, ಜನರು ತಮಗೆ ಇಷ್ಟವಾದ ರಾಕಿಗಳನ್ನು ಸಡಗರದಿಂದ ಖರೀದಿಸುತ್ತಿದ್ದಾರೆ.

