ಬೆಳಗಾವಿ, ಈದ್-ಎ-ಮಿಲಾದ ಹಬ್ಬವು ಶಾಂತಿ ಹಾಗೂ ಸೌಹಾರ್ದತೆಯ ಪ್ರತೀಕವಾಗಿದ್ದು ಕಳೆದ ಸಾಲಿನಂತೆ ಈ ಬಾರಿಯೂ ಶಾಂತಿ, ಸೌಹಾರ್ದತೆ ಹಾಗೂ ಪ್ರತಿಯೊಬ್ಬರ ಸಹಕಾರದೊಂದಿಗೆ ಈದ್-ಎ-ಮಿಲಾದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.


ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ಶನಿವಾರ (ಆ.22) ಜರುಗಿದ ಈದ್-ಎ-ಮಿಲಾದ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈದ್-ಎ-ಮಿಲಾದ ಹಬ್ಬವು ಶಾಂತಿ ಹಾಗೂ ಸೌಹಾರ್ದತೆಯ ಪ್ರತೀಕವಾಗಿದ್ದು ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಈದ್-ಎ-ಮಿಲಾದ ಹಬ್ಬದ
ಪ್ರಯುಕ್ತ ಜರುಗುವ ಮೆರವಣಿಗೆಯಲ್ಲಿ ಡಿ.ಜೆ. ಸಂಪೂರ್ಣ ನಿಷೇಧಿಸಲಾಗಿದ್ದು ಈ ಕುರಿತು ಸಮಾಜದ ಮುಖಂಡರು ತಮ್ಮ ವ್ಯಾಪ್ತಿಯಲ್ಲಿನ ಯುವಜನತೆಗೆ ಮನವರಿಕೆ ಮಾಡಲು ತಿಳಿಸಿದರು.

ಮೆರವಣಿಗೆ ಮಾರ್ಗ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ಮಾಡಲಾಗುವಂತಹ ಅಲಂಕಾರಗಳಲ್ಲಿ ವಿಧ್ಯುತ ಅವಗಡಗಳು ಸಂಭವಿಸಿದಂತೆ ನಿಗಾ ವಹಿಸಬೇಕು. ಹೆಸ್ಕಾಂ ಹಾಗೂ ಪೋಲಿಸ್ ಇಲಾಖೆ ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಮೆರವಣಿಗೆ ಸಾಗುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ
ಸೂಚಿಸಿದರು.
ಈದ್-ಎ-ಮಿಲಾದ ಮೆರವಣಿಗೆಯನ್ನು ಸಾಯಂಕಾಲ ಆರು ಗಂಟೆಯೊಳಗಾಗಿ ಮುಕ್ತಾಯಗೊಳಿಸುವಂತೆ ಸಮಾಜದ ಮುಖಂಡರುಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.
ಶಾಸಕರಾದ ರಾಜು(ಆಸೀಫ್) ಸೇಠ ಅವರು ಮಾತನಾಡಿ ಕಳೆದ ಮೂರು ವರ್ಷಗಳಿಂದ ಈದ್-ಎ-ಮಿಲಾದ ಹಬ್ಬವನ್ನು ನಗರದಲ್ಲಿ ಶಾಂತಿಯುತ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಗೆ ಕಳೆದ ಬಾರಿ ನೀಡಿದಂತಹ ಸಹಕಾರವನ್ನು ಈ ಬಾರಿಯೂ ನೀಡುವುದರ ಮೂಲಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ತಿಳಿಸಿದರು. ಮೆರವಣಿಗೆ ಸಾಗುವ ದಾರಿಯಲ್ಲಿನ ರಸ್ತೆ ಗುಂಡಿಗಳ ದುರಸ್ತಿಗೊಳಿಸಬೇಕು. ರಸ್ತೆಯಲ್ಲಿನ ಅನಧಿಕೃತ ಕೇಬಲ್ ತೆರವುಗೊಳಿಸಲು ತಿಳಿಸಿದರು.
ಪೋಲಿಸ್ ಆಯುಕ್ತರಾದ ಭೋರಸೆ ಭೂಷಣ ಗುಲಾಬರಾವ್ ಅವರು ಮಾತನಾಡಿ ಕಳೆದ ಮೂರು ವರ್ಷಗಳಿಂದ ಸಮಾಜದ ವತಿಯಿಂದ ಪೋಲಿಸ್ ಇಲಾಖೆಗೆ ಉತ್ತಮ ಸಹಕಾರ ದೊರೆತಿದ್ದು ಈ ಬಾರಿಯೂ ಅದೇ ರೀತಿಯ ಸಹಕಾರ ನೀಡಲು ಮನವಿ ಮಾಡಿದರು. ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಪ್ರಚೋದನಾತ್ಮಕ ಅಲಂಕಾರ, ಪೋಸ್ಟರ, ಬ್ಯಾನರಗಳನ್ನು ಅಳವಡಿಸಬಾರದು. ಸಾಮಾಜಿಕ ಜಾಲತಾಣಗಳ ಮೇಲೆ ಪೊಲಿಸ್ ಇಲಾಖೆ ನಿರಂತರ ನಿಗಾವಹಿಸುತ್ತಿದ್ದು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಸುದ್ಧಿಗಳು ಹರಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರುಗಳು ಈದ್-ಎ-ಮಿಲಾದ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಲು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದಹ ತಿಳಿಸಿ ಸಲಹೆಗಲಕನ್ನು ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಂ.ಎಂ.ಬಸರಗಿ, ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ.ಎಂ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರುಗಳು ಹಾಜರಿದ್ದರು.
