ಗಣೇಶೋತ್ಸವದ ಸಂಭ್ರಮಕ್ಕೆ ಬೆಳಗಾವಿ ನಗರ ಸಜ್ಜಾಗುತ್ತಿರುವ ಬೆನ್ನಲ್ಲೇ, ಗಣೇಶ ಮೂರ್ತಿಗಳನ್ನು ತಯಾರಿಸುವ ಕಲಾಕಾರರ ಕಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ‘ಜಂಬಗಿ ಸೂಪರ್ ಸ್ಪೆಷಾಲಿಟಿ ಐ ಇನ್ಸ್ಟಿಟ್ಯೂಟ್’ ಸಾಮಾಜಿಕ ಬದ್ಧತೆ ಮೆರೆದಿದೆ. ಸಂಸ್ಥೆಯು ‘ಕಲಾ ದೃಷ್ಟಿ’ ಉಪಕ್ರಮದಡಿ ಮೂರ್ತಿಕಾರರ ಕಾರ್ಯಸ್ಥಳಗಳಿಗೇ ನೇರವಾಗಿ ತೆರಳಿ ವಿಶೇಷ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿ ಉಚಿತ ತಪಾಸಣೆ ನಡೆಸಿತು.


ಗಣಪತಿ ಮೂರ್ತಿಗಳ ಕಣ್ಣು ಹಾಗೂ ಮುಖದ ಹಾವಭಾವಗಳನ್ನು ರೂಪಿಸುವಾಗ ಮೂರ್ತಿಕಾರರಿಗೆ ಚುರುಕಾದ ಕಣ್ಣಿನ ದೃಷ್ಟಿ ಅತ್ಯಂತ ಅಗತ್ಯವಾಗಿರುತ್ತದೆ. ಆದರೆ ಮೂರ್ತಿ ತಯಾರಿಕೆಯ ಧಾವಂತದಲ್ಲಿ ಕಲಾಕಾರರು ತಮ್ಮ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸುವುದನ್ನು ಮನಗಂಡ ‘ಜಂಬಗಿ ಸೂಪರ್ ಸ್ಪೆಷಾಲಿಟಿ ಐ ಇನ್ಸ್ಟಿಟ್ಯೂಟ್’ ವೈದ್ಯಕೀಯ ತಂಡವು, ಕಲಾಕಾರರು ಕೆಲಸ ಮಾಡುವ ಕಾರ್ಯಶಾಲೆಗಳಿಗೆ ತೆರಳಿ ನೇತ್ರ ತಪಾಸಣೆ, ಉಚಿತ ಕನ್ನಡಕ ಸಲಹೆ ಹಾಗೂ ಸೂಕ್ತ ವೈದ್ಯಕೀಯ ಮಾರ್ಗದರ್ಶನ ನೀಡಿತು. ಜಂಬಗಿ ಐ ಇನ್ಸ್ಟಿಟ್ಯೂಟ್ ಕೈಗೊಂಡ ಈ ವಿಶಿಷ್ಟ ಸಾಮಾಜಿಕ ಕಾರ್ಯಕ್ಕೆ ನಗರದ ಕಲಾಕಾರರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
