ರಕ್ಷಾ ಬಂಧನ ಕೇವಲ ಅಣ್ಣ-ತಂಗಿಯರ ಪ್ರೀತಿಯ ಹಬ್ಬವಷ್ಟೇ ಅಲ್ಲ, ಸಮಾಜದ ರಕ್ಷಣೆಗಾಗಿ ಶ್ರಮಿಸುತ್ತಿರುವ ವೀರ ಯೋಧರು ಹಾಗೂ ಸಿಬ್ಬಂದಿಯ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಪವಿತ್ರ ದಿನ. ಬೆಳಗಾವಿ ಕೋಟೆ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೇನಾ ಯೋಧರು, ಪೊಲೀಸ್ ಸಿಬ್ಬಂದಿ ಮತ್ತು ಪೌರಕಾರ್ಮಿಕರಿಗೆ ರಾಖಿ ಕಟ್ಟಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಲಾಗಿದೆ.

ಬೆಳಗಾವಿಯ ಐತಿಹಾಸಿಕ ಕೋಟೆ ವಲಯದಲ್ಲಿ ರಕ್ಷಾ ಬಂಧನದ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಯಿತು. ದೇಶದ ಗಡಿ ಕಾಯುವ ಸೈನಿಕರು, ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರಕಾರ್ಮಿಕರು ಮತ್ತು ಜ್ಞಾನ ದಾಸೋಹ ನೀಡುವ ಶಿಕ್ಷಕರಿಗೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ರಾಖಿ ಕಟ್ಟಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಮಾಜದ ಸ್ವಾಸ್ಥ್ಯ ಮತ್ತು ಸುರಕ್ಷತೆಗಾಗಿ ಅಹರ್ನಿಶಿ ಶ್ರಮಿಸುತ್ತಿರುವವರ ತ್ಯಾಗ ಅಪಾರವಾದುದು ಎಂದು ಬಣ್ಣಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕೇಕರೇ ಸೇರಿದಂತೆ ಶೀಲಾ ಗಡ್ಕರಿ, ಕವಿತಾ ಹಿರೇಮಠ, ಶಾಂತಾ ಸವದಿ, ಸೀಮಾ ಜೋಶಿ ಹಾಗೂ ಇಂದ್ರಾ ಬಾಳಿಕಾಯಿ ಉಪಸ್ಥಿತರಿದ್ದು, ಸೈನಿಕರು ಮತ್ತು ಸಿಬ್ಬಂದಿಯೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
