ರಾಜ್ಯದಾದ್ಯಂತ ಇಂದು ಸಿವಿಲ್ ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲೂ ಪಾರದರ್ಶಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನೇರ ಉಸ್ತುವಾರಿಯಲ್ಲಿ, ಬಿಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ.
ರಾಜ್ಯ ಸರ್ಕಾರದ ಸಿವಿಲ್ ಪೊಲೀಸ್ ಪೇದೆ ಹುದ್ದೆಯ ಪರೀಕ್ಷೆಯು ಯಾವುದೇ ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ನಡೆಯುವಂತೆ ಬೆಳಗಾವಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ನಗರದ ವಿಶ್ವೇಶ್ವರಯ್ಯ ನಗರದಲ್ಲಿರುವ ಜಿಲ್ಲಾ ಖಜಾನೆ ಕಾರ್ಯಾಲಯದಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸಮ್ಮುಖದಲ್ಲಿ ಖಜಾನೆಯ ಕೀ ಓಪನ್ ಮಾಡಿ, ಬಿಗಿ ಪೊಲೀಸ್ ಭದ್ರತೆಯೊಂದಿಗೆ 15ಕ್ಕೂ ಹೆಚ್ಚು ವಾಹನಗಳಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಯಿತು. ಬೆಳಗಾವಿ ನಗರದ 46 ಹಾಗೂ ಚಿಕ್ಕೋಡಿ ಶೈಕ್ಷಣಿಕ ವ್ಯಾಪ್ತಿಯ 15 ಕೇಂದ್ರಗಳು ಸೇರಿದಂತೆ ಒಟ್ಟು 61 ಕೇಂದ್ರಗಳಲ್ಲಿ 25,164 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಹೈಟೆಕ್ ಅಕ್ರಮಗಳಿಗೆ ತಡೆ ನೀಡಲು ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ, ಫೇಶಿಯಲ್ ರೆಕಗ್ನಿಷನ್ ಕ್ಯಾಮೆರಾಗಳು ಹಾಗೂ ತಪಾಸಣೆ ಯಂತ್ರಗಳನ್ನು ಅಳವಡಿಸಲಾಗಿದೆ. ಬ್ಲೂಟೂತ್ ಸಾಧನಗಳ ದುರ್ಬಳಕೆ ತಡೆಯಲು 64 ಇಎನ್ಟಿ (ENT) ಪ್ಯಾರಾಮೆಡಿಕಲ್ ತಂಡಗಳನ್ನು ಅಭ್ಯರ್ಥಿಗಳ ತಪಾಸಣೆಗೆ ನಿಯೋಜಿಸಲಾಗಿದ್ದು, ಕಡ್ಡಾಯ ಡ್ರೆಸ್ಕೋಡ್ ಪಾಲನೆಗೆ ಆಫೀಸರ್ಗಳನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದಿಂದ ಬರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ವ್ಯವಸ್ಥೆ ಮಾಡಲಾಗಿದೆ.
KEA ವತಿಯಿಂದ ನಡೆಯುತ್ತಿರುವ ಸಿವಿಲ್ ಪೊಲೀಸ್ ಪೇದೆ ಪರೀಕ್ಷೆಗೆ ಜಿಲ್ಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಫೇಶಿಯಲ್ ರೆಕಗ್ನಿಷನ್, ಸಿಸಿಟಿವಿ ಹಾಗೂ ಇಎನ್ಟಿ ಪ್ಯಾರಾಮೆಡಿಕಲ್ ತಂಡಗಳಿಂದ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.
