ಬೆಳಗಾವಿಯಲ್ಲಿ ಕಾನೂನುಬಾಹಿರವಾಗಿ ಬೀದಿಬದಿಯಲ್ಲಿ ‘ಮ್ಯಾಜಿಕ್ ಬುಕ್’ ಮಾರಾಟ ನಿರತರಾಗಿದ್ದ ನಾಲ್ವರು ಅಪ್ರಾಪ್ತ ಮಕ್ಕಳನ್ನು ಸಾಮಾಜಿಕ ಕಾರ್ಯಕರ್ತರ ತಂಡ ಹಾಗೂ ಪೋಲಿಸ್ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಲಾಗಿದೆ.

ಚಿಕ್ಕ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಿಕೊಂಡು ಬೀದಿಬದಿಯಲ್ಲಿ ಮ್ಯಾಜಿಕ್ ಬುಕ್ ಮಾರಾಟ ಮಾಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಮಾಜಿಕ ಕಾರ್ಯಕರ್ತರ ರಕ್ಷಣಾ ಪಡೆ, ಬೆಳಗಾವಿ ನಗರ ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ‘ಅಕ್ಕ ಪಡೆ’ ಜಂಟಿ ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆ ವೇಳೆ ನಾಲ್ವರು ಅಪ್ರಾಪ್ತ ಮಕ್ಕಳೊಂದಿಗೆ ಐವರು ಮಹಿಳೆಯರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹೂಲಿ, ಶಶಿಕಾಂತ್ ಅಂಬೇವಾಡ್ಕರ್, ವಿಕಿ ಮೆಹ್ತಾ, ಮೈಕಲ್ ಪಿಂಟೋ ಹಾಗೂ ಮತಿನ್ ಮಕಾನದಾರ್ ಅವರ ತಂಡ ಈ ಪ್ರಶಂಸನೀಯ ಕಾರ್ಯ ನಡೆಸಿದೆ. ರಕ್ಷಿಸಲ್ಪಟ್ಟ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ತಂಡದ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
