Belagavi

ಬೆಳಗಾವಿ: ಸರ್ದಾರ್ ಸ್ಕೂಲ್ ಆವರಣದಲ್ಲಿ ದೇಶದಲ್ಲೇ ವಿನೂತನ ‘ಚೆಸ್ ಪಾರ್ಕ್’ ; ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಲೋಕಾರ್ಪಣೆ

Share

ಬೆಳಗಾವಿಯ ಐತಿಹಾಸಿಕ ಸರ್ದಾರ್ ಹೈಸ್ಕೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ವಿನೂತನ ‘ಚೆಸ್ ಪಾರ್ಕ್’ ಲೋಕಾರ್ಪಣೆಗೊಂಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಾನಸಿಕ ಏಕಾಗ್ರತೆ ಹಾಗೂ ಆಟದ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಪಾರ್ಕ್ ರೂಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕೃತವಾಗಿ ಉದ್ಘಾಟಿಸಿದರು.

ಬೆಳಗಾವಿ ನಗರದ ಸರ್ದಾರ್ ಸ್ಕೂಲ್ ಆವರಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಅವರ 2025-26ನೇ ಸಾಲಿನ KLLADS ಅನುದಾನದಡಿ ನಿರ್ಮಿಸಲಾದ ನೂತನ ‘ಚೆಸ್ ಪಾರ್ಕ್’ ಅನ್ನು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಸಚಿವರು ಹಾಗೂ ಶಾಸಕರು ಸ್ವತಃ ಮಕ್ಕಳೊಂದಿಗೆ ಚೆಸ್ ಆಡುವ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸಿದರು.

ತರಗತಿಗಳು ಮುಗಿದ ನಂತರ ವಿದ್ಯಾರ್ಥಿಗಳು ಬಸ್ ಸ್ಟ್ಯಾಂಡ್‌ಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ಸುಮ್ಮನೆ ಕುಳಿತು ಮೊಬೈಲ್ ಬಳಕೆಯಲ್ಲಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುವುದು ಈ ಪಾರ್ಕ್‌ನ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ವಿಕಾಸ, ಚೆಸ್ ಹಾಗೂ ಕ್ಯಾರಮ್ ಆಟಗಳ ಬಗ್ಗೆ ಆಸಕ್ತಿ ಮೂಡಿಸಲು ಸೂಕ್ತ ವಾತಾವರಣ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಶಾಲಾ ಮಟ್ಟದ ಹಾಗೂ ಇಂಟರ್-ಸ್ಕೂಲ್ ಚೆಸ್ ಸ್ಪರ್ಧೆಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಮಾಹಿತಿ ನೀಡಿದರು.

ಪ್ರಸ್ತುತ ಸರ್ದಾರ್ ಶಾಲೆಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದ್ದರೂ, ಸಾರ್ವಜನಿಕರು ಹಾಗೂ ಆಸಕ್ತ ಚೆಸ್ ಆಟಗಾರರು ಸದಸ್ಯತ್ವ (Membership) ಪಡೆದು ಇದನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುವುದು. ಜೊತೆಗೆ, ಬೆಳಗಾವಿ ಜಿಲ್ಲೆಯಾದ್ಯಂತ ಪಂಚಾಯತ್ ಮಟ್ಟದಲ್ಲೂ ಇಂತಹ ವಿನೂತನ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಎಸಿ ಶ್ರವಣಕುಮಾರ್ ನಾಯಕ್, ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ, ಎಸ್ಪಿ ಕೆ. ರಾಮರಾಜನ್ ಹಾಗೂ ಬಿಇಒ ಲೀಲಾವತಿ ಹಿರೇಮಠ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!