ಬೆಳಗಾವಿಯ ಪ್ರಖ್ಯಾತ ಕೆಎಲ್ಇ ಡಾ. ಸಂಪತ್ಕುಮಾರ್ ಎಸ್. ಶಿವನಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತೊಂದು ವೈದ್ಯಕೀಯ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಡಾ. ಅಭಿಲಾಷ್ ನೇತೃತ್ವದ ತಜ್ಞ ವೈದ್ಯರ ತಂಡವು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಅತ್ಯಂತ ಯಶಸ್ವಿಯಾಗಿ ಅಸ್ಥಿಮಜ್ಜೆ ಕಸಿ (Bone Marrow Transplant) ಚಿಕಿತ್ಸೆ ನೀಡುವ ಮೂಲಕ ಹೊಸ ಜೀವನ ಕಲ್ಪಿಸಿದೆ.

ಅಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರ ಸಮಯೋಚಿತ ನಿರ್ಧಾರದಿಂದಾಗಿ ಬೆಳಗಾವಿಯ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಜಟಿಲವಾದ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಭಿಲಾಷ್ ಮತ್ತು ಅವರ ತಂಡದ ಕಠಿಣ ಶ್ರಮದಿಂದಾಗಿ ಈ ದುಸ್ತರ ಪ್ರಕ್ರಿಯೆ ಸಾಧ್ಯವಾಗಿದ್ದು, ರೋಗಿಯ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಅತ್ಯಾಧುನಿಕ ಹಾಗೂ ವೆಚ್ಚದಾಯಕ ಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ಉನ್ನತ ಗುಣಮಟ್ಟದಲ್ಲಿ ಒದಗಿಸುತ್ತಿರುವುದಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಬಸವರಾಜ ಬಿರಾದಾರ ಅವರು ಹರ್ಷ ವ್ಯಕ್ತಪಡಿಸಿದ್ದು, ವೈದ್ಯರ ಸಾಧನೆಯನ್ನು ಶ್ಲಾಘಿಸಿದ್ದಾರೆ.
