ಯೆಳ್ಳೂರು ರಸ್ತೆಯಲ್ಲಿ ಸಂಚರಿಸುವ ಸರ್ಕಾರಿ ಬಸ್ಗಳು ನಿಗದಿಪಡಿಸಿದ ನಿಲ್ದಾಣಗಳಲ್ಲಿ ನಿಲ್ಲದೆ ಇರುವುದರಿಂದ ಸ್ಥಳೀಯ ರೈತರು ಹಾಗೂ ಮಹಿಳಾ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.


ಯೆಳ್ಳೂರು ರಸ್ತೆಯ ಸುತ್ತಮುತ್ತಲಿನ ಭಾಗಗಳಿಂದ ಪ್ರತಿದಿನ ನೂರಾರು ರೈತರು, ಮಹಿಳಾ ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಕೃಷಿ ಕೆಲಸಗಳಿಗಾಗಿ ಹಾಗೂ ನಗರ ಪ್ರದೇಶಗಳಿಗೆ ಸಂಚರಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸಾರಿಗೆ ಸಂಸ್ಥೆಯ ಬಸ್ಗಳು ಇಲ್ಲಿನ ಹಣಮಂತಗೌಡ ಬಸ್ ನಿಲ್ದಾಣ ಸೇರಿದಂತೆ ಹಲವು ನಿಗದಿತ ಹಾಗೂ ವಿನಂತಿ ಸ್ಟಾಪ್ಗಳಲ್ಲಿ ನಿಲ್ಲದೆ ಹೋಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದರು. ಇದರಿಂದ ಬೇಸತ್ತ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಒಟ್ಟಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ದೂರನ್ನು ನೀಡಿದ್ದರು.ಗ್ರಾಮಸ್ಥರ ದೂರಿಗೆ ತಕ್ಷಣವೇ ಸ್ಪಂದಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇಂದು ಯೆಳ್ಳೂರು ರಸ್ತೆಯ ಬಸ್ ನಿಲ್ದಾಣಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ಈ ಮಾರ್ಗದಲ್ಲಿ ಚಲಿಸುವ ಎಲ್ಲಾ ಬಸ್ಗಳನ್ನು ಅಧಿಕೃತ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ನಿಲ್ಲಿಸುವಂತೆ ಚಾಲಕರು ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಸಾರ್ವಜನಿಕರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
