Chikkodi

ಮಳೆ ಅಬ್ಬರ: ಶ್ರೀ ಕ್ಷೇತ್ರ ನೃಸಿಂಹವಾಡಿಯ ದತ್ತ ಮಂದಿರದ ಬಳಿ ಬಂದ ಪ್ರವಾಹದ ನೀರು

Share

ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ, ನರಸಿಂಹವಾಡಿಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ನೃಸಿಂಹವಾಡಿಯ ಕೃಷ್ಣಾ ಮತ್ತು ಪಂಚಗಂಗಾ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ನದಿಗಳ ನೀರಿನ ಮಟ್ಟ ಬರೋಬ್ಬರಿ 10 ಅಡಿಗಳಷ್ಟುಹೆಚ್ಚಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ.

ನದಿಗಳ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಪ್ರವಾಹದ ನೀರು ಈಗ ಪ್ರಸಿದ್ಧ ದತ್ತ ಮಂದಿರದ ಅತ್ಯಂತ ಸಮೀಪಕ್ಕೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ದತ್ತ ದೇವಸ್ಥಾನದ ಆಡಳಿತ ಮಂಡಳಿಯು ಸಂಪೂರ್ಣವಾಗಿ ಹೈ ಅಲರ್ಟ್ ಆಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನದಿ ದಡದಲ್ಲಿರುವ ದೇವಸ್ಥಾನದ ಪೂಜಾ ಸಾಹಿತ್ಯ, ಪೀಠೋಪಕರಣಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ತುರ್ತಾಗಿ ಸ್ಥಳಾಂತರಿಸಲಾಗುತ್ತಿದೆ.

ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಪವಿತ್ರ ಸಂಗಮ ಸ್ಥಾನದಲ್ಲೇ ಇರುವ ಪ್ರಸಿದ್ಧ ಸಂಗಮೇಶ್ವರ ದೇವಾಲಯವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ನದಿಗಳ ರಭಸದ ಹರಿವು ಮುಂದುವರಿದಿದ್ದು, ತೀರ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ.

ಶ್ರೀ ಕ್ಷೇತ್ರ ನೃಸಿಂಹವಾಡಿಯ ದತ್ತಮಂದಿರಕ್ಕೆ ಮಹಾರಾಷ್ಟ್ರ ಮಾತ್ರವಲ್ಲದೆ ನೆರೆಯ ಕರ್ನಾಟಕದಿಂದಲೂ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಸದ್ಯ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ಏರುತ್ತಿರುವುದರಿಂದ, ಭಕ್ತರು ಹಾಗೂ ಪ್ರವಾಸಿಗರು ನದಿ ದಡಕ್ಕೆ ತೆರಳದಂತೆ ಮತ್ತು ಜಾಗರೂಕರಾಗಿರುವಂತೆ ಸ್ಥಳೀಯ ಆಡಳಿತ ಹಾಗೂ ದೇವಸ್ಥಾನ ಸಮಿತಿ ವಿನಂತಿಸಿದೆ.

Tags:

error: Content is protected !!