ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಖಂಡಿಸಿ ಹಾಗೂ ‘ನೀಟ್’ ಪರೀಕ್ಷಾ ಹಗರಣದ ತನಿಖೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರಗತಿಪರ ಹೋರಾಟಗಾರರು ಬೀದಿಗಿಳಿದಿದ್ದಾರೆ.

ಬೆಳಗಾವಿ ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ದೇಶದಲ್ಲಿ ಸದ್ಯ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಾದ ‘ನೀಟ್’ನಲ್ಲಿ ನಡೆದಿರುವ ಅಕ್ರಮಗಳು ಮತ್ತು ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ತೀವ್ರ ಖಂಡನೀಯವಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರಾಜು ಟೋಪಣ್ಣವರ್ ಆರೋಪಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಮುಖ ಪತ್ರಿಕೆ ಸೋರಿಕೆ ದಂಧೆಗಳ ಲಿಂಕ್ ಗುಜರಾತ್ನಲ್ಲಿದ್ದು, ಕೆಲವು ಗುಜರಾತಿ ಉದ್ಯಮಿಗಳ ಹಿತಾಸಕ್ತಿಗಾಗಿ ಇಡೀ ದೇಶದ ಭವಿಷ್ಯವನ್ನು ಹಾಳುಮಾಡಲಾಗುತ್ತಿದೆ. 10-15 ವರ್ಷಗಳ ಹಿಂದೆ ಜನರು ಹೇಗೆ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಿ ಬದಲಾವಣೆ ತಂದಿದ್ದರೋ, ಅದೇ ರೀತಿಯ ಪರಿಸ್ಥಿತಿ ಈಗ ಮತ್ತೆ ಎದುರಾಗಿದ್ದು, ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಸಂಪೂರ್ಣವಾಗಿ ಜನವಿರೋಧಿಯಾಗಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಜನರು ಜಾಗೃತರಾಗಿ ಬೀದಿಗಿಳಿದು ಹೋರಾಡುವ ಮೂಲಕ ಮತ್ತೊಮ್ಮೆ ವ್ಯವಸ್ಥೆಯಲ್ಲಿ ಪರಿವರ್ತನೆ ತರಬೇಕಾದ ಅನಿವಾರ್ಯತೆ ಇದೆ ಎಂದು ಅವರು ಕರೆ ನೀಡಿದರು.
ಹೋರಾಟಗಾರ ಶಿವಾಜಿರಾವ್ ಕಾಗಣೀಕರ್ ಅವರು, ಇಷ್ಟು ದೊಡ್ಡ ಮಟ್ಟದಲ್ಲಿ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದ್ದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ಇದುವರೆಗೆ ರಾಜೀನಾಮೆ ನೀಡದಿರುವುದು ಖಂಡನೀಯ. ಕಳೆದ 20 ದಿನಗಳಿಂದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು ಯಾರೂ ಅವರ ಅಹವಾಲು ಕೇಳಲು ಮುಂದಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಬೇಕಾದ ಸರ್ಕಾರ, ತನಗೆ ಬೇಕಾದಾಗ ಸಂವಿಧಾನವನ್ನು ಬಳಸಿ, ಬೇಡವಾದಾಗ ಸರ್ವಾಧಿಕಾರದ ಧೋರಣೆ ಪ್ರದರ್ಶಿಸುತ್ತಿದೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕೊನೆ ಕ್ಷಣದಲ್ಲಿ ಪತ್ರಿಕೆ ಸೋರಿಕೆಯಾಗಿ ಅನ್ಯಾಯವಾಗುತ್ತಿರುವುದರಿಂದ ದೇಶದ ಹಲವು ವಿದ್ಯಾರ್ಥಿಗಳು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಈ ದೇಶದ ಆಧಾರ ಸ್ತಂಭವಾಗಿದ್ದು, ಅವರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳಬೇಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೋರ್ವ ಹೋರಾಟಗಾರರು ಮಾತನಾಡಿ ಕಳೆದ 20 ದಿನಗಳಿಂದ ಸೋನಮ್ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರವು ಅವರೊಂದಿಗೆ ಮಾತುಕತೆ ನಡೆಸುವ ಸೌಜನ್ಯ ತೋರದೆ, ಬಲವಂತವಾಗಿ ಅವರನ್ನು ಬಂಧಿಸಿ ಉಪವಾಸವನ್ನು ಮುರಿಯಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಬೇಡಿಕೆಗಳನ್ನು ಮಂಡಿಸುವ ಪೂರ್ಣ ಹಕ್ಕಿದೆ. ಸದ್ಯ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಾದ ‘ನೀಟ್’ನಲ್ಲಿ ನಡೆದಿರುವ ಬೃಹತ್ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದರೊಂದಿಗೆ ಕೇಂದ್ರ ಸರ್ಕಾರದ ಶಿಕ್ಷಣ ನೀತಿಯು ಸಂಪೂರ್ಣವಾಗಿ ದೋಷಪೂರಿತವಾಗಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಒಂದು ವೇಳೆ ಶಿಕ್ಷಣ ವ್ಯವಸ್ಥೆ ಖಾಸಗೀಕರಣಗೊಂಡರೆ ಈ ದೇಶದ ಬಡವರು, ದಲಿತರು ಮತ್ತು ಮಹಿಳೆಯರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದರು.
ಈ ವೇಳೆ ವಿವಿಧ ಪ್ರಗತಿಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
