ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ಕಂಪನಿಗಳಿಗೆ ಬೆಳಗಾವಿ ಜಿಲ್ಲಾಡಳಿತ ಶಾಕ್ ನೀಡಿದೆ. ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರ ಖಡಕ್ ಸೂಚನೆ ಮೇರೆಗೆ ತಡರಾತ್ರಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಎರಡು ಪ್ರಮುಖ ಹೂಡಿಕೆ ಸಂಸ್ಥೆಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದ್ದು, ತನಿಖೆ ತೀವ್ರಗೊಂಡಿದೆ.


ಸಾರ್ವಜನಿಕರಿಗೆ ಭಾರೀ ಪ್ರಮಾಣದ ಬಡ್ಡಿ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಡಳಿತದ ಅಧಿಕಾರಿಗಳು ನಗರದ ಎರಡು ಹೂಡಿಕೆ ಕಂಪನಿಗಳ ಮೇಲೆ ತಡರಾತ್ರಿ ದಿಢೀರ್ ಜಂಟಿ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ಬೆಳಗಾವಿ ಉಪವಿಭಾಗಾಧಿಕಾರಿ (AC) ಶ್ರವಣಕುಮಾರ್ ನಾಯಕ್ ನೇತೃತ್ವದಲ್ಲಿ ಕಂದಾಯ, ಸಹಕಾರ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಟಿಳಕವಾಡಿ ನಗರದ ‘ಗೋವರ್ಧನ್ ಎಲ್ಎಲ್ಪಿ’ ಹಾಗೂ ಮಹಾತ್ಮಾ ಫುಲೆ ರಸ್ತೆಯಲ್ಲಿರುವ ‘ಸಿಟಿ ಇಂಡೆಕ್ಸ್’ ಕಂಪನಿಗಳ ಮೇಲೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ದಾಳಿ ಮಾಡಲಾಗಿದ್ದು, ತಡರಾತ್ರಿವರೆಗೂ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಎರಡು ಕಂಪನಿಗಳಿಂದ ಬರೋಬ್ಬರಿ 65 ಕೋಟಿ ರೂಪಾಯಿಗೂ ಅಧಿಕ ಹಣ ಹೂಡಿಕೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಎಸಿ ಶ್ರವಣಕುಮಾರ್, “ಗೋವರ್ಧನ್ ಕಂಪನಿಯಲ್ಲಿ ಸುಮಾರು 35 ಕೋಟಿ ರೂ. ಹಾಗೂ ಸಿಟಿ ಇಂಡೆಕ್ಸ್ನಲ್ಲಿ 30 ಕೋಟಿ ರೂ. ಹೂಡಿಕೆಯಾಗಿರುವುದು ಕಂಡುಬಂದಿದೆ. ಗೋವರ್ಧನ್ ಕಂಪನಿಯ ವರದಿಯನ್ನು ನಾಳೆಯೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಸಿಟಿ ಇಂಡೆಕ್ಸ್ ಕಂಪನಿಯು ಸೆಬಿಯಲ್ಲಿ (SEBI) ನೋಂದಣಿಯಾಗಿರುವುದು ಕಂಡುಬಂದಿದ್ದು, ಇದರ ಸತ್ಯಾಸತ್ಯತೆಯ ತನಿಖೆಗಾಗಿ ನಾಳೆಯೂ ದಾಳಿ ಮುಂದುವರಿಯಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಹಣ ದುರುಪಯೋಗ ತಡೆಯಲು ಜಿಲ್ಲಾಡಳಿತದ ಈ ಆಪರೇಷನ್ ಸದ್ಯ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
