ಬೆಳಗಾವಿ ನಗರದ ಯು.ಕೆ. ಹೋಟೆಲ್ ಬಳಿ ಕಾಮಗಾರಿ ಕೈಗೆತ್ತಿಕೊಂಡ ಸಂಸ್ಥೆಯ ಬೇಜವಾಬ್ದಾರಿ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ರಸ್ತೆ ಮಧ್ಯದಲ್ಲೇ ಅರ್ಧಂಬರ್ಧ ತಗ್ಗು ತೋಡಿ ಹಾಗೇ ಬಿಟ್ಟಿರುವುದರಿಂದ ಸವಾರರು ಅನಾಹುತಕ್ಕೆ ಈಡಾಗುತ್ತಿದ್ದು, ಸ್ಥಳೀಯರ ಆಕ್ರೋಶ ಮುಗಿಲುಮುಟ್ಟಿದೆ.

ಬೆಳಗಾವಿಯ ಯು.ಕೆ. ಹೋಟೆಲ್ ಪಕ್ಕದ ಮುಖ್ಯ ರಸ್ತೆಯಲ್ಲಿ ಖಾಸಗಿ ಕಂಪನಿಯೂ ರಾತ್ರೋರಾತ್ರಿ ಕಾಮಗಾರಿ ನಡೆಸಿ, ರಸ್ತೆಯ ಮಧ್ಯದಲ್ಲೇ ಚರಂಡಿ/ಕಾಲುವೆಯಂತಹ ದೊಡ್ಡ ಗುಂಡಿಯನ್ನು ತೋಡಿ ಸರಿಯಾಗಿ ಮುಚ್ಚದೆ ತೆರಳಿದೆ. ಸೂಕ್ತ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳಿಲ್ಲದೆ ಅರ್ಧಂಬರ್ಧ ಕಾಮಗಾರಿ ಮಾಡಿರುವುದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ರಸ್ತೆ ಕಾಣದೆ, ಹಲವು ಕಾರು ಹಾಗೂ ದ್ವಿಚಕ್ರ ವಾಹನಗಳು ಈ ಕೆಸರು ತುಂಬಿದ ತಗ್ಗಿನಲ್ಲಿ ಸಿಲುಕಿ ಹಾಕಿಕೊಳ್ಳುತ್ತಿವೆ. ಗಂಟೆಗಟ್ಟಲೆ ವಾಹನಗಳು ಸಿಲುಕಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಈ ಸಂಬಂಧ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಖಾಸಗಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ತೀವ್ರ ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ.
