Belagavi

ಬೆಳಗಾವಿ: ‘ಪ್ರತಿ ಪಂಡರಪುರ’ ವಡಗಾವನ ಶ್ರೀ ವಿಠ್ಠಲ ಮಂದಿರದಲ್ಲಿ ಆಷಾಢ ಏಕಾದಶಿ ಮಹೋತ್ಸವ – ಸಾವಿರಾರು ಭಕ್ತರ ಸಾಗರ!

Share

‘ಪ್ರತಿ ಪಂಡರಪುರ’ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯ ವಡಗಾವನ ಪುರಾತನ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಆಷಾಢ ಏಕಾದಶಿಯ ಪವಿತ್ರ ಪರ್ವಕಾಲದ ನಿಮಿತ್ತ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು. ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ವಿಠ್ಠಲ-ರುಕ್ಮಿಣಿ ದೇವಿಯ ದರ್ಶನ ಪಡೆದು ಧನ್ಯತೆ ಮೆರೆದರು.

ಆಷಾಢ ಏಕಾದಶಿಯ ಶುಭ ದಿನದಂದು ಬೆಳಗಾವಿಯ ವಡಗಾವನ ಪುರಾತನ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಬೆಳಗಿನ ಜಾವ ೫:೫೦ಕ್ಕೆ ಸರಿಯಾಗಿ ಶ್ರೀ ವಿಠ್ಠಲ ಹಾಗೂ ರುಕ್ಮಿಣಿ ದೇವಿಯ ಮೂರ್ತಿಗಳಿಗೆ ಮಹಾ ಅಭಿಷೇಕ, ನಯನಮನೋಹರ ಶೃಂಗಾರ ಪೂಜೆ ಮತ್ತು ಮಹಾಮಂಗಲಾರತಿ ಜರುಗಿತು. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸ್ಥಳೀಯ ಸೇವಕರು ಹಾಗೂ ವಿಠ್ಠಲ ಮಂದಿರ ವಿಕಾಸ ಸಮಿತಿಯ ಪದಾಧಿಕಾರಿಗಳು ಭಕ್ತರ ಸುಲಭ ಮತ್ತು ಸುಸೂತ್ರ ದರ್ಶನಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಹರಿದುಬಂದ ಭಕ್ತಸಾಗರವು ದಿನವಿಡೀ ದರ್ಶನ ಪಡೆದು ಪುನೀತರಾಯಿತು.

ದಿನವಿಡೀ ಮಂದಿರದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಶಂಕರ ಪಾಟೀಲ ಗುರೂಜಿ ಅವರ ಮಾರ್ಗದರ್ಶನದಲ್ಲಿ ವಿಠ್ಠಲ ಮಂದಿರದ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿಪೂರ್ವಕ ಭಜನೆಗಳು ಜರುಗಿದವು. ಜೀವ್ಹೇಶ್ವರ ಮಹಿಳಾ ಮಂಡಳ, ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರ ಹಾಗೂ ಜಾಗೃತಿ ಮಹಿಳಾ ಕಿಶೋರಿ ಬಳಗದ ವತಿಯಿಂದ ಭಕ್ತಿಯಿಂದ ವಿಷ್ಣು ಸಹಸ್ರನಾಮ ಪಠಣ ನೆರವೇರಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗಜಾನನ ಘಾಟಗೆ, ಕುಶ್ ಮಹಾರಾಜ್, ಶುಭಾಂಗಿ ಕಾರೇಕರ ಮತ್ತು ವಿಶಾಲ್ ಮೋಡಕ್ ಅವರ ನೇತೃತ್ವದಲ್ಲಿ ೪೦ ಮಕ್ಕಳ ತಂಡದಿಂದ ಸಂಗೀತ ಭಜನಾ ಗಾಯನ ಕಾರ್ಯಕ್ರಮ ಆಯೋಜನೆಗೊಂಡು ನೆರೆದಿದ್ದ ಭಕ್ತರ ಮನಸೆಳೆಯಿತು. ರಾತ್ರಿಯ ವೇಳೆಯಲ್ಲಿ ವಿವಿಧ ವಾರಕರಿ ಮಂಡಳಿಗಳಿಂದ ನಡೆದ ಭಜನಾ ಕಾರ್ಯಕ್ರಮಗಳು ವಡಗಾವನ ಬಾಜಾರ ಗಲ್ಲಿಯ ಪುರಾತನ ಮಂದಿರದ ಪರಿಸರದಲ್ಲಿ ಭಕ್ತಿರಸವನ್ನು ಪಸರಿಸಿದವು ಎಂದು ಮಂದಿರದ ಪ್ರಮುಖರು ಮಾಹಿತಿ ನೀಡಿದ್ದಾರೆ.

Tags:

error: Content is protected !!