Belagavi

ಬೆಳಗಾವಿಯಲ್ಲಿ ವಟಪೂರ್ಣಿಮೆ ಸಂಭ್ರಮ: ಪತಿಯ ದೀರ್ಘಾಯುಷ್ಯಕ್ಕಾಗಿ ಸುಮಂಗಲಿಯರ ವಿಶೇಷ ವ್ರತ

Share

ಇಂದು ಬೆಳಗಾವಿಯ ಜಿಲ್ಲೆಯಾದ್ಯಂತ ವಟಪೂರ್ಣಿಮೆಯ ಸಡಗರ ಮನೆಮಾಡಿದ್ದು, ಮುತ್ತೈದೆಯರು ತಮ್ಮ ಪತಿಯ ದೀರ್ಘಾಯುಷ್ಯ ಹಾಗೂ ಕುಟುಂಬದ ಸಮೃದ್ಧಿಗಾಗಿ ಸಡಗರದಿಂದ ವಟಸಾವಿತ್ರಿ ವ್ರತವನ್ನು ಆಚರಿಸುತ್ತಿದ್ದಾರೆ. ಬೆಳಗಾವಿ ನಗರದಲ್ಲಿಯೂ ಅತ್ಯುತ್ಸಾಹದಲ್ಲಿ ಸಾವಿತ್ರಿಯರು ವಟ ಪೂರ್ಣಿಮೆಯ ವ್ರತವನ್ನು ಕೈಗೊಂಡರು.

ಬೆಳಗಾವಿ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಇಂದು ವಟಸಾವಿತ್ರಿ ವ್ರತದ ಸಂಭ್ರಮ ಕಳೆಗಟ್ಟಿದೆ. ನಗರದ ಪ್ರಮುಖ ಕೇಂದ್ರಗಳಾದ ರಾಣಿ ಚೆನ್ನಮ್ಮ ವೃತ್ತದ ಶ್ರೀ ಗಣೇಶ ಮಂದಿರ, ಆರ್.ಟಿ.ಓ. ರಸ್ತೆಯ ಸೋನ್ಯಾ ಮಾರುತಿ ಮಂದಿರ, ಹಾಗೂ ಹರಿದ್ರಾ ಗಣೇಶ್ ಮಂದಿರ ಇನ್ನುಳಿದ ಕಡೆಗಳಲ್ಲಿ ಬೆಳ್ಳಂಬೆಳಗ್ಗೆಯೇ ಮುತ್ತೈದೆಯರ ದಂಡು ಜಮಾಯಿಸಿತ್ತು. ವಡಗಾಂವ, ಶಹಾಪೂರ, ಖಾಸಭಾಗ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಸುಮಂಗಲಿಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಸಡಗರದಿಂದ ಆಲದ ಮರಕ್ಕೆ ನೂಲು ಸುತ್ತಿ ತಮ್ಮ ಪತಿಯ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೈಟ್
ವಟಸಾವಿತ್ರಿ ವ್ರತವು ಮುತ್ತೈದೆಯರ ಪಾಲಿಗೆ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ವ್ರತವಾಗಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ, ಮಹಾಸತಿ ಸಾವಿತ್ರಿಯು ತನ್ನ ಅಪ್ರತಿಮ ಪತಿಭಕ್ತಿ ಹಾಗೂ ಚಾತುರ್ಯದಿಂದ ಮೃತ್ಯುದೇವತೆಯಾದ ಯಮಧರ್ಮನನ್ನೇ ಮೆಚ್ಚಿಸಿ, ಆಲದ ಮರದ ಕೆಳಗೆ ಮೃತಪಟ್ಟಿದ್ದ ತನ್ನ ಪತಿ ಸತ್ಯವಾನನ ಪ್ರಾಣವನ್ನು ಮರಳಿ ಪಡೆದ ದಿನ ಇದಾಗಿದೆ. ಹಾಗಾಗಿಯೇ ಈ ದಿನ ಸುಮಂಗಲಿಯರು ದೀರ್ಘಾಯುಷಿಯಾದ ಆಲದ ವಟವೃಕ್ಷಕ್ಕೆ ನೂಲು ಸುತ್ತಿ ಪೂಜಿಸುತ್ತಾರೆ. ತ್ರಿಮೂರ್ತಿಗಳ ಸ್ವರೂಪವಾಗಿರುವ ಆಲದ ಮರವು ಹೇಗೆ ನೂರಾರು ವರ್ಷಗಳ ಕಾಲ ಗಟ್ಟಿಯಾಗಿ ನಿಲ್ಲುತ್ತದೆಯೋ, ಹಾಗೆಯೇ ತಮ್ಮ ಪತಿಯ ಆಯುಷ್ಯ, ಆರೋಗ್ಯ ಮತ್ತು ಸೌಭಾಗ್ಯವೂ ವೃದ್ಧಿಸಲಿ ಹಾಗೂ ತಮ್ಮ ಸಂಸಾರವು ಸದಾ ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಪ್ರಾರ್ಥಿಸುವುದು ಈ ವ್ರತದ ಮುಖ್ಯ ಮಹತ್ವವಾಗಿದೆ.

ನಗರದ ಸುಪ್ರಸಿದ್ಧ ಕಪಿಲೇಶ್ವರ ಮಂದಿರದಲ್ಲೂ ವಟಪೂರ್ಣಿಮೆಯ ಪೂಜಾ ಕೈಂಕರ್ಯಗಳು ಅತ್ಯಂತ ವೈಭವದಿಂದ ಜರುಗಿದವು. ದೇವಸ್ಥಾನಕ್ಕೆ ಧಾವಿಸಿದ ನೂರಾರು ಮಹಿಳೆಯರು ಆಲದ ಮರಕ್ಕೆ ನೂಲು ಸುತ್ತಿ ಪ್ರದಕ್ಷಿಣೆ ಹಾಕಿದರು. ಈ ವೇಳೆ ಮಾತನಾಡಿದ ಸುಮಂಗಲೆಯರು, ತಾವು ಕಳೆದ ಹಲವಾರು ವರ್ಷಗಳಿಂದ ಈ ಪವಿತ್ರ ವ್ರತವನ್ನು ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಮರಕ್ಕೆ ಐದು ಬಗೆಯ ಹಣ್ಣುಗಳು, ಉಡಿ ಸಾಮಗ್ರಿಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದ ನಂತರ, ಪರಸ್ಪರ ಮುತ್ತೈದೆಯರಿಗೆ ಉಡಿ ತುಂಬಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಪತಿಯ ದೀರ್ಘಾಯುಷ್ಯ ಹಾಗೂ ಸುಖ-ಸಮೃದ್ಧಿಗಾಗಿ ಮನೆಯ ಹಿರಿಯರು ರೂಢಿಸಿಕೊಂಡು ಬಂದ ಸಂಪ್ರದಾಯವನ್ನು ಇಂದಿನ ಪೀಳಿಗೆಯೂ ಭಕ್ತಿಯಿಂದ ಮುಂದುವರಿಸಿಕೊಂಡು ಹೊರಟಿದೆ. ವ್ರತದ ಮಹಿಮೆಯನ್ನು ಸ್ಮರಿಸಿದ ಮಹಿಳೆಯರು, ಪೌರಾಣಿಕ ಹಿನ್ನೆಲೆಯುಳ್ಳ ಮಹಾಸತಿ ಸಾವಿತ್ರಿಯಂತೆ ತಾವೂ ಕೂಡ ಅಖಂಡ ಸೌಭಾಗ್ಯವತಿಯರಾಗಿರಲು ಈ ವ್ರತ ಅತ್ಯಂತ ಪವಿತ್ರವಾಗಿದೆ ಎಂದರು. ದಿನವಿಡೀ ಕಟ್ಟುನಿಟ್ಟಿನ ಉಪವಾಸ ವ್ರತವನ್ನು ಆಚರಿಸಿದ ಸುಮಂಗಲೆಯರು, ಸಂಜೆ ಜರುಗುವ ವಿಶೇಷ ಪೂಜೆಯ ಬಳಿಕ ವಟಸಾವಿತ್ರಿ ವ್ರತವನ್ನು ಸಂಪೂರ್ಣಗೊಳಿಸಲಿದ್ದಾರೆ.

Tags:

error: Content is protected !!