BELAGAVI

ಬೆಳಗಾವಿಯಲ್ಲಿ ನಾಳೆ ಲೈಂಗಿಕ ಅಲ್ಪಸಂಖ್ಯಾತರ ಬದುಕಿನ ಕಥೆ ಹೇಳುವ “ತಲ್ಕಿ – ಟ್ರುತ್ ಡ್ರೀಮ್” ನಾಟಕ ಪ್ರದರ್ಶನ

Share

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವೈವಿಧ್ಯಮಯ ಬದುಕು ಮತ್ತು ಅವರ ಕನಸುಗಳನ್ನು ರಂಗಭೂಮಿಯ ಮೂಲಕ ಅನಾವರಣಗೊಳಿಸಲು ವಿಶಿಷ್ಟ ಕಲಾತ್ಮಕ ಪ್ರಯೋಗವೊಂದು ಸಜ್ಜಾಗಿದೆ. ಪಯಣ ಮತ್ತು ಸಾವಲಿ ಫೌಂಡೇಶನ್ ಬೆಳಗಾವಿ ಸಂಸ್ಥೆಗಳ ಸಹಯೋಗದಲ್ಲಿ ನಾಳೆ ಬೆಳಗಾವಿಯಲ್ಲಿ ‘ತಲ್ಕಿ – ಟ್ರುತ್ ಡ್ರಿಮ್’ ನಾಟಕದ 44ನೇ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಗಾವಿಯಲ್ಲಿ ಕರೆಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಮಾಹಿತಿಯನ್ನು ನೀಡಲಾಯಿತು. ಸಾಮಾಜಿಕ ಕಾರ್ಯಕರ್ತೆ ಹಾಗೂ ಕಲಾವಿದೆ ಚಾಂದನಿ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ “ತಲ್ಕಿ – ಟ್ರುತ್ ಡ್ರಿಮ್” ನಾಟಕವು ದಿನಾಂಕ 14.06.2026ರ ಭಾನುವಾರ ಬೆಳಿಗ್ಗೆ 11:30ಕ್ಕೆ ಬೆಳಗಾವಿಯ ಕುಮಾರಗಂಧರ್ವ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ‘ಪಯಣ’ ಸಂಸ್ಥೆಯ ಸಹ-ಸಂಸ್ಥಾಪಕರೂ ಆದ ಚಾಂದನಿ ಅವರು 2021ರಲ್ಲಿ ಈ ರಂಗ ಪ್ರಯೋಗವನ್ನು ಪ್ರಾರಂಭಿಸಿದ್ದರು. ಈಗಾಗಲೇ ಕರ್ನಾಟಕ, ದೆಹಲಿ, ಅಹಮದಾಬಾದ್, ಬರೋಡಾ ಮತ್ತು ಮೈಸೂರಿನ ಪ್ರಮುಖ ನಾಟಕೋತ್ಸವಗಳಲ್ಲಿ ಯಶಸ್ವಿಯಾಗಿ 43 ಪ್ರದರ್ಶನಗಳನ್ನು ಕಂಡು ಜನಮನ್ನಣೆ ಗಳಿಸಿರುವ ಈ ನಾಟಕವನ್ನು ಆಧರಿಸಿ ‘ಕನ್ನಡಿ’ ಎಂಬ ಕಥಾಪುಸ್ತಕವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. ಈ ಕಲಾತ್ಮಕ ಪ್ರಯೋಗದ ಮುಂದಿನ ಹಂತವಾಗಿ 58 ವರ್ಷಕ್ಕಿಂತ ಮೇಲ್ಪಟ್ಟ ಟ್ರಾನ್ಸ್‌ಜೆಂಡರ್ ಮತ್ತು ಮಂಗಳಮುಖಿ ಸಮುದಾಯದ ಹಿರಿಯರು ಇದರಲ್ಲಿ ಪ್ರಮುಖವಾಗಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಈ ನಾಟಕವು ತೃತೀಯಲಿಂಗಿ ಸಮುದಾಯದ ಬದುಕಿನ ವಾಸ್ತವತೆ, ಸವಾಲುಗಳು ಮತ್ತು ನೋವು-ನಲಿವುಗಳ ಸತ್ಯವಾದ ಹೆಜ್ಜೆಗುರುತುಗಳನ್ನು ಒಳಗೊಂಡಿದೆ. ಶ್ರೀ ಜಿತು ಸುಂದರಂ ಅವರ ನಿರ್ದೇಶನ ಹಾಗೂ ರೇವತಿ ಅವರ ಸಹ-ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ನಾಟಕದಲ್ಲಿ ಚಾಂದನಿ (ಶಕುಂತಲೆ), ಭಾನು (ಜಯಮಾಲಿನಿ), ಲಕ್ಷ್ಮಿ (ಮೈಸೂರು ಮಹಾರಾಣಿ), ಶಾಂತಮ್ಮ (ಆದಿವಾಸಿ ಮಹಿಳೆ), ದೇವಿಯವರ ತಾಯಿ ಸರವಣ, ಆಂದಾಳ್ (ರೇವತಿ.ಎ) ಮತ್ತು ಅರ್ಧನಾರೀಶ್ವರ (ಶೋಭನಾಕುಮಾರಿ) ಸೇರಿದಂತೆ ಶೋಭನಾ, ಶಕಿಲಾ, ಲಕ್ಷ್ಮಮ್ಮ, ಭಾನಮ್ಮ, ಶಾಂತಮ್ಮ ಮತ್ತು ರೇವತಿ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಲಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಲೈಂಗಿಕ ಅಲ್ಪಸಂಖ್ಯಾತರಿಗೆ ಗೌರವಯುತ ಹಾಗೂ ಸ್ವತಂತ್ರ ಬದುಕು ಕಟ್ಟಿಕೊಡಲು ಶ್ರಮಿಸುತ್ತಿರುವ ಸಾವಲಿ ಫೌಂಡೇಶನ್ ಮತ್ತು ಪಯಣ ಸಂಸ್ಥೆಯು ಈ ವಿಶಿಷ್ಟ ಕಲಾ ಪ್ರದರ್ಶನಕ್ಕೆ ಸಾಕ್ಷಿಯಾಗಲು ಸಾರ್ವಜನಿಕರಿಗೆ ಮುಕ್ತ ಆಮಂತ್ರಣ ನೀಡಿದೆ.

Tags:

error: Content is protected !!