ಶ್ರೀ ದತ್ತಾತ್ರೇಯ ಇವರ ನಾಲ್ಕನೇ ಅವತಾರವಾಗಿರುವ ಶ್ರೀ ಸ್ವಾಮಿ ಸಮರ್ಥ ಮಹಾರಾಜರು ಸಮಾಜದಲ್ಲಿ ಎಲ್ಲರಿಗೆ “ನೀನು ಹೆದರಬೇಡ, ನಿನ್ನೊಂದಿಗೆ ನಾ ಇದ್ದೇನೆ” ಎಂದು ನೀಡಿರುವ ಅಭಯದ ಮಂತ್ರ ಅನೇಕ ಕುಟುಂಬಗಳಿಗೆ ಆಧಾರ ಸ್ತಂಭವಾಗಿದೆ. ಸ್ವಾಮಿ ಸಮರ್ಥ ಇವರ ಲಕ್ಷಾಂತರ ಭಕ್ತರು ಅವರ ಆರಾಧನೆ ಮಾಡುತ್ತಾರೆ ಎಂದು ಶ್ರೀ ಸ್ವಾಮಿ ಸಮರ್ಥ ಇವರ ಗೋವಾ ರಾಜ್ಯದ ಶಿನೋಳಿ ಗ್ರಾಮದ ಶಾಖೆ ಅಧ್ಯಕ್ಷರು ಹಾಗೂ ಸ್ವಾಮೀಜಿಯವರ ಬಗ್ಗೆ ನಿರ್ಮಿಸಿದ “ಬ್ರಹ್ಮಾಂಡ ನಾಯಕ” ಚಲನಚಿತ್ರದ ಮುಖ್ಯ ನಟ ನೀಲೇಶ್ ವೆರೆನೆಕರ್ ಇವರು ಶಿರಗುಪ್ಪೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರದಂದು ಗೋವಾದಿಂದ ಶ್ರೀ ಸ್ವಾಮಿ ಸಮರ್ಥರ ಮುಖ್ಯ ಮಠ ಅಕ್ಕಲಕೋಟೆಯವರೆಗೆ ರಥಯಾತ್ರೆ ಹಮ್ಮಿಕೊಂಡಿದ್ದು, ಇದರ ಆಗಮನ ಶಿರಗುಪ್ಪಿಯಲ್ಲಿ ಆಯಿತು. ಸ್ವಾಮಿ ಸಮರ್ಥರ ಎಲ್ಲ ಸದ್ಭಕ್ತರಿಗೆ ಸನ್ಮಾನಿಸಿ, ಸ್ವಾಮಿ ಸಮರ್ಥರ ಬಗ್ಗೆ ಅನೇಕ ತಜ್ಞ ಶಿಷ್ಯರು ಉತ್ತಮ ಮಾಹಿತಿ ನೀಡಿದರು.

ನೀಲೇಶ್ ವರ್ಣಿಕರ್ ಹಾಗೂ ವಿಜಯ್ ರೇಡೆಕರ್, ರಿತೇಶ್ ನಾಗವೇಕರ್ ಇವರು ಸ್ವಾಮಿ ಸಮರ್ಥ ಇವರ ಬಗ್ಗೆ ನಿರ್ಮಿಸಿದ “ಬ್ರಹ್ಮಾಂಡ ನಾಯಕ” ಚಲನಚಿತ್ರದ ಬಗ್ಗೆ ಮಾಹಿತಿ ನೀಡಿ, ಶೀಘ್ರದಲ್ಲಿ ಇದು ಎಲ್ಲೆಡೆ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಶಿರಗುಪ್ಪಿ ಗ್ರಾಮದಲ್ಲಿ ಶ್ರೀ ಸ್ವಾಮಿ ಸಮರ್ಥ ಶಾಖೆಯನ್ನು ಕಳೆದ ಆರು ತಿಂಗಳ ಹಿಂದೆ ಪ್ರಾರಂಭಿಸಿದ್ದು, ಇಲ್ಲಿಗೆ ಎಲ್ಲ ಸಮಾಜದ ಮಹಿಳೆಯರು ಒಂದುಗೂಡಿ ಸ್ವಾಮಿ ಸಮರ್ಥ ಸದ್ಭಕ್ತರು ಪ್ರತಿದಿನ ಪ್ರಾರ್ಥನೆ, ಮಂತ್ರೋಪಚಾರ ಹಾಗೂ ಅವರ ಸಂದೇಶವನ್ನು ಪ್ರತಿಯೊಬ್ಬರಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದಕ್ಕೆ ಒಳ್ಳೆಯ ರೀತಿಯ ಬೆಂಬಲ ಈ ಗ್ರಾಮದಲ್ಲಿ ದೊರೆತಿದೆ ಎಂದು ಶಿರಗುಪ್ಪಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಈ ಶಾಖೆಯ ಪ್ರಮುಖರಾದ ಶ್ರೀಮತಿ ಅಪರ್ಣಾ ಅಪ್ಪಾಸಾಹೇಬ ಪಾಟೀಲ್ ಮತ್ತು ಧನಶ್ರೀ ಸುಳಕುಡೆ ಮಾಹಿತಿ ನೀಡಿದರು. ಶಿರಗುಪ್ಪಿಯಲ್ಲಿ ಶ್ರೀ ಸ್ವಾಮಿ ಸಮರ್ಥ ಶಾಖೆ ವತಿಯಿಂದ ಅನೇಕ ಸಮಸ್ಯೆಯಲ್ಲಿರುವ ಕುಟುಂಬಗಳಿಗೆ ಸಹಕರಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ಶ್ರೀಮತಿ ಅಪರ್ಣಾ ಪಾಟೀಲ್ ಹಾಗೂ ಸದಸ್ಯರು ನಿರಂತರವಾಗಿ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಶಿರಗುಪ್ಪಿ ಪಿಕೆಪಿಎಸ್ ಮಾಜಿ ಅಧ್ಯಕ್ಷರು ಹಾಗೂ ನ್ಯಾಯವಾದಿ ಅಪ್ಪಾಸಾಹೇಬ್ ಪಾಟೀಲ್, ಲಲಿತಾ ರಾಯಗೌಡ ಪಾಟೀಲ್, ಶ್ರೀಮತಿ ಹರ್ಷಲ ಮುಂಜೆ, ಸುನೀತಾ ಚೌಗುಲೆ, ಅನಿತಾ ಪಾಟೀಲ್, ಅಶ್ವಿನಿ ಪಾಟೀಲ್, ಅನಿತಾ ಚೌಗುಲೆ, ಶೀಲಾ ಮಾಳಾಯಿ, ಲತಾ ಪಾಟೀಲ್ ಸೇರಿದಂತೆ ಸ್ವಾಮಿ ಸಮರ್ಥ ಭಕ್ತರು ಪಾಲ್ಗೊಂಡಿದ್ದರು. ಸಂಜೆ ಸ್ವಾಮಿ ಸಮರ್ಥ ರಥವು ಅಥಣಿ ಮಾರ್ಗವಾಗಿ ಅಕ್ಕಲಕೋಟೆ ಮಠದತ್ತ ಪ್ರಯಾಣ ಬೆಳೆಸಿತು.
ವರದಿ: ಸುಕುಮಾರ್ ಬನ್ನೂರೆ, ಇನ್ ನ್ಯೂಸ್ ಕಾಗವಾಡ
