Belagavi

ಏಕಾಏಕಿ 30 ವರ್ಷಗಳ ಹಳೆಯ ರಸ್ತೆ ಬಂದ್ ಮಾಡಿದ ಜಮೀನು ಮಾಲೀಕರು:

Share

ಕಳೆದ 30 ವರ್ಷಗಳಿಂದ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದ ಆಶ್ರಯ ಕಾಲೋನಿಯ ನಿವಾಸಿಗಳಿಗೆ ಏಕಾಏಕಿ ಜಮೀನು ಮಾಲೀಕರು ರಸ್ತೆ ಬಂದ್ ಮಾಡಿರುವುದರಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಆಶ್ರಯ ಕಾಲನಿಯ ನಿವಾಸಿಗಳು ರಸ್ತೆ ಬಂದ್ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಮುಸ್ತಾಕ್ ಮುಲ್ಲಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯರು, ಹಲವು ವರ್ಷಗಳಿಂದ ಇದೇ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದೇವೆ. ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆ ಮುಚ್ಚಿರುವುದು ಅನ್ಯಾಯ ಎಂದು ಆಕ್ರೋಶ ಹೊರಹಾಕಿದರು. ರಸ್ತೆ ಬಂದ್ ಆಗಿರುವುದರಿಂದ ಕಾಲನಿಯ ಜನರಿಗೆ ಸಂಚಾರ, ದೈನಂದಿನ ಕೆಲಸಗಳು ಹಾಗೂ ತುರ್ತು ಸೇವೆಗಳಿಗೂ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದರು. ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿ, ಸಾರ್ವಜನಿಕರ ಸಂಚಾರಕ್ಕೆ ರಸ್ತೆ ತೆರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.

ಡಾ. ರೋಹಿತ್ ಬಾಮನೆ ಅವರು ಮಾತನಾಡಿ, ಕಳೆದ ೨೦-೩೦ ವರ್ಷಗಳಿಂದ ಸಾರ್ವಜನಿಕರು ಮತ್ತು ಕಾಲೇಜು ಬಸ್‌ಗಳು ಬಳಸುತ್ತಿರುವ ಈ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಜಾಗ ಎಂದು ಹೇಳಿ ಜೆಸಿಬಿ ಮೂಲಕ ಅಡ್ಡಿಪಡಿಸುತ್ತಿದ್ದಾರೆ. ಕಾರ್ಪೊರೇಟರ್ ಹಾಗೂ ಪೊಲೀಸರಿಗೆ ದೂರು ನೀಡಿ ಕೆಲಸ ನಿಲ್ಲಿಸಿದರೂ ಸಹ ಆ ವ್ಯಕ್ತಿಗಳು ಒತ್ತಾಯಪೂರ್ವಕವಾಗಿ ಮತ್ತೆ ಜೆಸಿಬಿ ತಂದು ಕೆಲಸ ಮುಂದುವರಿಸಿದ್ದಾರೆ. ಆದ್ದರಿಂದ ಕಾನೂನು ನಿಯಮಗಳ ಪ್ರಕಾರ ದಾಖಲೆಗಳನ್ನು ಪರಿಶೀಲಿಸಿ ಈ ಸಮಸ್ಯೆ ಬಗೆಹರಿಯುವವರೆಗೂ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಡಬೇಕೆಂದು ಅವರು ಆಗ್ರಹಿಸಿದ್ದಾರೆ.

Tags:

error: Content is protected !!