Belagavi

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಅಪರಿಚಿತ ಯುವಕ ಸಾವು, ಗುರುತು ಪತ್ತೆಗೆ ಪೊಲೀಸರ ಮನವಿ

Share

ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಯುವಕನೊಬ್ಬ ದುರ್ಮರಣ ಹೊಂದಿದ್ದಾನೆ. ಅಪಘಾತವೆಸಗಿದ ಕಾರು ಚಾಲಕ ಪರಾರಿಯಾಗಿದ್ದು, ಮೃತನ ಗುರುತು ಇನ್ನು ಪತ್ತೆಯಾಗಿಲ್ಲ.

ದಿನಾಂಕ 18/06/2026 ರಂದು ಮುಂಜಾನೆ 06:50 ರ ಸುಮಾರಿಗೆ ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದ ಅಲಾರವಾಡ ಬ್ರಿಜ್ ಕಡೆಯಿಂದ ಹಳೆಯ ಬೆಳಗಾವಿಗೆ ಹೋಗುವ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪರಿಚಿತ ಕಾರೊಂದು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಮೃತ ಯುವಕನು 5 ಅಡಿ 7 ಇಂಚು ಎತ್ತರ, ಸಾಧಾರಣ ಮೈಕಟ್ಟು ಹಾಗೂ ಗೋಧಿಬಣ್ಣ ಹೊಂದಿದ್ದು, ಮೈಮೇಲೆ ಬಿಳಿ ಮತ್ತು ಅರ್ಧ ತೋಳಿನ ನೀಲಿ ಬಣ್ಣದ ಶರ್ಟ್ ಹಾಗೂ ಕಡು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಆತನ ಬಲಗೈ ಮೇಲೆ ಆಯಿ ಹಾಗೂ ಪೂಜಾ ಎಂದು ಹಚ್ಚೆ ಹಾಕಿಸಿಕೊಂಡಿರುವುದು ಕಂಡುಬಂದಿದೆ. ಸದ್ಯ ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ತಕ್ಷಣವೇ ಠಾಣೆಯ ದೂರವಾಣಿ ಸಂಖ್ಯೆ 0831-2405278 ಅಥವಾ 9480804103 ಗೆ ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.

Tags:

error: Content is protected !!