ಉತ್ತರ ಕರ್ನಾಟಕ ಭಾಗದ ಏಕೈಕ ಮುಸ್ಲಿಂ ಶಾಸಕರಾಗಿರುವ ಆಸೀಫ್ ಸೇಠ್ ಅವರಿಗೆ ಮುಂಬರುವ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕಿತ್ತೂರು ಕರ್ನಾಟಕ ಅಲ್ಪಸಂಖ್ಯಾತ ಮುಸ್ಲಿಂ ಜಮಾತಗಳ ಒಕ್ಕೂಟ ಒಕ್ಕೊರಲಿನಿಂದ ಆಗ್ರಹಿಸಿದೆ.

ಬೆಳಗಾವಿಯಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಪ್ರಮುಖರು, ಸರ್ಕಾರಕ್ಕೆ ಈ ಕುರಿತು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಿತ್ತೂರು ಕರ್ನಾಟಕದ ಒಟ್ಟು 18 ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಏಕೈಕ ಮುಸ್ಲಿಂ ಶಾಸಕರೆಂದರೆ ಅದು ಬೆಳಗಾವಿ ಉತ್ತರದ ಶಾಸಕ ಆಸೀಫ್ ಸೇಠ್ ಮಾತ್ರ. ಹೀಗಾಗಿ ಅವರಿಗೆ ಹೊಸ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಮುಸ್ಲಿಂ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಮುಸ್ಲಿಂ ನಾಯಕರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿಯೂ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಇಡೀ ಉತ್ತರ ಕರ್ನಾಟಕದ ಅಲ್ಪಸಂಖ್ಯಾತ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಎಂದು ಒಕ್ಕೂಟದ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸಿದರು.

ಹೊಸ ಸಚಿವ ಸಂಪುಟ ರಚನೆ ಮತ್ತು ವಿಸ್ತರಣೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಒಕ್ಕೂಟ ನಿರ್ಧರಿಸಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲೇ ಮುಖ್ಯಮಂತ್ರಿಗಳ ಬಳಿಗೆ ಬೃಹತ್ ನಿಯೋಗವನ್ನು ಕೊಂಡೊಯ್ಯಲು ಒಕ್ಕೂಟದ ಪದಾಧಿಕಾರಿಗಳು ತೀರ್ಮಾನಿಸಿದೆ ಎಂದರು.
ಈ ಸಂದರ್ಭದಲ್ಲಿ ಮೂಡಲಗಿಯ ಲಾಲಸಾಬ್ ಸಿದ್ಧಾಪುರ, ಬೈಲಹೊಂಗಲದ ಅಡ್ವೋಕೇಟ್ ಮೌಲಾಸಾಬ್ ಮದನಗಿ, ರಾಯಬಾಗ ಕುಡಚಿಯ ಇರ್ಫಾನ್ ತರಡೆ ಮತ್ತು ಲೋಂಆಡದ ಸಲೀಮ್ ಪಟೇಲ್ ಇನ್ನುಳಿದವರು ಭಾಗಿಯಾಗಿದ್ಧರು.
