ದೇಶದ ಆರ್ಥಿಕ ಪ್ರಗತಿಯು ಕೇವಲ ಜಿಡಿಪಿ ಬೆಳವಣಿಗೆಯನ್ನು ಮಾತ್ರ ಅವಲಂಬಿಸಿಲ್ಲ, ಬದಲಿಗೆ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶಗಳು ಸಿಗುವುದು ಅಷ್ಟೇ ಮುಖ್ಯ ಎಂದು ಖ್ಯಾತ ಕೈಗಾರಿಕೋದ್ಯಮಿ ಸಚೀನ್ ಸಬ್ನಿಸ್ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿಯ ಫೌಂಡ್ರಿ ಕ್ಲಸ್ಟರ್‌ನಲ್ಲಿ ಇಂದು ನಡೆದ ‘ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಗಾವಿಯ ಫೌಂಡ್ರಿ ಕ್ಲಸ್ಟರ್‌ನಲ್ಲಿ ಇಂದು ‘ವಿಕಸಿತ ಭಾರತ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಭವ್ಯ ಕಾರ್ಯಕ್ರಮಕ್ಕೆ ಮಹಾಪೌರ ಪ್ರೀತಿ ಕಾಮಕರ್, ಸಂಸದ ಜಗದೀಶ್ ಶೆಟ್ಟರ್, ಮಾಜಿ ರಾಜ್ಯಸಭಾ ಸದಸ್ಯ ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಹಾಗೂ ಕೈಗಾರಿಕೋದ್ಯಮಿ ಸಚೀನ್ ಸಬ್ನಿಸ್ ಸೇರಿದಂತೆ ಹಲವು ಗಣ್ಯರು ಜಂಟಿಯಾಗಿ ಚಾಲನೆ ನೀಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪ್ರಮುಖ ಕೈಗಾರಿಕೋದ್ಯಮಿ ಸಚೀನ್ ಸಬ್ನಿಸ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಸಂಕಲ್ಪದ ಅಡಿಯಲ್ಲಿ ಜಾರಿಗೆ ತಂದಿರುವ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಗಳ ಮಹತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಹಾಗೂ ಬೆಳಗಾವಿಯ ಉದ್ಯೋಗದಾತರು ಮತ್ತು ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪಿಎಂ-ವಿಬಿಆರ್‌ವೈ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೊಸದಾಗಿ ನೇಮಕವಾದ ನೌಕರರಿಗೆ ನೇಮಕಾತಿ ಪತ್ರಗಳನ್ನು ಹಂಚುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಸುಮಾರು 200ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು, ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಇತ್ತೀಚಿನ ಕಾರ್ಮಿಕ ಸುಧಾರಣೆಗಳ ಬಗ್ಗೆಯೂ ಮಹತ್ವದ ಮಾಹಿತಿ ನೀಡಲಾಯಿತು.
