ಯುವಕರ ಎರಡು ಗುಂಪುಗಳ ನಡುವೆ ಜಗಳವಾಗಿ ಮಾರಾಮಾರಿ ಆರಂಭಗೊಂಡಿದೆ. ಇದನ್ನ ಬಿಡಿಸಲು ಹೋದ ಪೊಲೀಸ್ ಪೇದೆಯ ಮೇಲೆ ಯುವಕರು ಹಲ್ಲೆ ನಡೆಸಿ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆದಿದೆ.

ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಯುವಕರ ಎರಡು ಗುಂಪುಗಳ ಮಧ್ಯೆ ಜಗಳವಾಗಿ ಹೊಡೆದಾಡುತ್ತಿದ್ದರು ಎನ್ನಲಾಗಿದೆ. ಸ್ಥಳದಲ್ಲಿಯೇ ಇದ್ದ ಮಾರ್ಕೇಟ್ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಲ್ಲಿಕಾರ್ಜುನ ಗುಂಜೀಕರ ಅವರು ಜಗಳವಾಡಬೇಡಿ ಎಂದು ಜಗಳ ಬಿಡಿಸಲು ಹೋಗಿದ್ದರು ಎನ್ನಲಾಗಿದೆ. ಕೂಡಲೇ ಅವರು ಮಾರ್ಕೇಟ್ ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು.

ಕೂಡಲೇ ಮಾರ್ಕೇಟ್ ಸಿಪಿಐ ಜೆ.ಎಂ. ಕಾಲಿಮಿರ್ಚಿ ಹಾಗೂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ನಡು ರಸ್ತೆಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದ ಯುವಕರಿಗೆ ಕಪಾಳಮೋಕ್ಷ ಮಾಡಿ ವಶಕ್ಕೆ ಪಡೆದು ಮಾರ್ಕೇಟ್ ಪೊಲೀಸ್ ಠಾಣೆಗೆ ಎಳೆದೊಯ್ಯಬೇಕಾಯಿತು.
ಈ ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ತನಿಖೆಯ ಬಳಿಕವೇ ಇವರ ಕಿತ್ತಾಟಕ್ಕೆ ಏನು ಕಾರಣ ಎಂಬುದು ಹೊರ ಬರಲಿದೆ.
