BELAGAVI

ಬೆಳಗಾವಿಯಲ್ಲಿ ಗಡಿ ಕದನ ತೀವ್ರ: ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸದ ಪಾಲಿಕೆ ವಿರುದ್ಧ ಕನ್ನಡಿಗರ ಆಕ್ರೋಶ; ಪ್ರಾದೇಶಿಕ ಆಯುಕ್ತರಿಗೆ ಮನವಿ

Share

ಬೆಳಗಾವಿ ಮಹಾನಗರ ಪಾಲಿಕೆಯ ಕನ್ನಡ ವಿರೋಧಿ ನಿಲುವನ್ನು ಖಂಡಿಸಿ ಈಗ ಗಡಿನಾಡಿನಲ್ಲಿ ಕನ್ನಡಿಗರ ಸ್ವಾಭಿಮಾನದ ಹೋರಾಟ ಮತ್ತಷ್ಟು ಉಗ್ರರೂಪ ಪಡೆದಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿ ಅಂಗೀಕರಿಸಲು ನಿರಾಕರಿಸುತ್ತಿರುವ ಮಹಾನಗರ ಪಾಲಿಕೆ ವಿರುದ್ಧ ಕಿತ್ತೂರು ಕರ್ನಾಟಕ ಸೇನೆ ಹಾಗೂ ಸ್ವಾಭಿಮಾನಿ ಕನ್ನಡಿಗರ ಒಕ್ಕೂಟ ಇಂದು ಪ್ರಾದೇಶಿಕ ಆಯುಕ್ತರಿಗೆ ಮಹತ್ವದ ದೂರು ನೀಡಿ, ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸುವಂತೆ ಒತ್ತಾಯಿಸಿದೆ.

ಮಹಾನಗರ ಪಾಲಿಕೆ ವಿರುದ್ಧ ಕಿತ್ತೂರು ಕರ್ನಾಟಕ ಸೇನೆ ಹಾಗೂ ಸ್ವಾಭಿಮಾನಿ ಕನ್ನಡಿಗರ ಒಕ್ಕೂಟವು ಇಂದು ಪ್ರತಿಭಟನಾ ರ್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿ ಮನವಿಯನ್ನು ಸಲ್ಲಿಸಿತು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಹಾಗೂ ‘ಗಡಿ ವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ’ ಎಂಬ ಗೊತ್ತುವಳಿಯನ್ನು ಕಡ್ಡಾಯವಾಗಿ ಅಂಗೀಕರಿಸಬೇಕೆಂದು ಆಗ್ರಹಿಸಿ ಕಳೆದ ಮಾರ್ಚ್ 26 ರಿಂದ 20ಕ್ಕೂ ಅಧಿಕ ಕನ್ನಡ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಈ ಹಿಂದೆ 2005 ರ ಅಕ್ಟೋಬರ್ 27 ರಂದು ಬೆಳಗಾವಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾಗಿ ಗೊತ್ತುವಳಿಯನ್ನು ಸ್ವೀಕರಿಸಲಾಗಿತ್ತು. 2004 ರಿಂದ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಗಡಿವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರವು ಅಂದಿನ ಮಹಾನಗರ ಪಾಲಿಕೆಯ ಅದೇ ನಿಲುವನ್ನು ಪೂರಕ ದಾಖಲೆಯನ್ನಾಗಿ ಬಳಸಿಕೊಳ್ಳುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ, ಈಗ ತಕ್ಷಣವೇ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸಬೇಕೆಂದು ಕನ್ನಡ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಆದರೂ ಪಾಲಿಕೆಯಲ್ಲಿ 35 ಸದಸ್ಯರ ಬಹುಮತ ಹೊಂದಿರುವ ಬಿಜೆಪಿ ನಾಯಕರು ಕಳೆದ ಎರಡು ತಿಂಗಳಿಂದ ಇದಕ್ಕೆ ಮಣಿಯದೇ ಇರುವುದು ಕನ್ನಡ ನಾಡು ಮತ್ತು ನುಡಿಗೆ ಬಗೆದ ದ್ರೋಹ ಎಂದು ಒಕ್ಕೂಟದ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ಇಡೀ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ತಕ್ಷಣವೇ ವರದಿ ಕಳುಹಿಸಬೇಕು. ಇಲ್ಲದಿದ್ದರೇ, ಕನ್ನಡ ವಿರೋಧಿ ನೀತಿ ಅನುಸರಿಸುವ ಸದಸ್ಯತ್ವವನ್ನು ರದ್ಧುಪಡಿಸಬೇಕು. ಇದಕ್ಕೆ ಸ್ಪಂದನೆ ದೊರೆಯದಿದ್ದರೇ, ಪಾಲಿಕೆ ಎದುರು ಕಪ್ಪು ಬಟ್ಟೆ ಪ್ರದರ್ಶನ ಮತ್ತು ಮಸಿ ಬಳಿಯುವ ಮೂಲಕ ಉಗ್ರ ಹೋರಾಟ ನಡೆಸಲಾಗುವುದೆಂದು ಮಹಾದೇವ ತಳವಾರ ಎಚ್ಚರಿಕೆಯನ್ನು ನೀಡಿದರು.

ಬೆಳಗಾವಿ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಮಹೇಶ ಶಿಗೇಹಳ್ಳಿ, ಕೊಟ್ರೇಶ ಪಟ್ಟಣಶೆಟ್ಟಿ, ದೇವೇಂದ್ರ ತಳವಾರ, ರವಿ ಪಾಟೀಲ, ರಮೇಶ ರಾಮಗಾನಟ್ಟಿ ಹಾಗೂ ರತ್ನಾ ಗೋದಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Tags:

error: Content is protected !!