ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಗೂ ರೌಡಿ ಶೀಟರ್ ಮೇಲೆ ನಿಗಾ ಇಡಲು ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಸೈಬರ್ ಸೆಲ್ ಆರಂಭಿಸಿದ್ದು ಪ್ರತಿಯೊಬ್ಬರ ಮೇಲೆ ನಿಗಾ ಇಟ್ಟಿದೆ.

ಹೌದು. ಸಮಾಜದಲ್ಲಿ ಶಾಂತಿ ಕದಡಿಸುವ ಪೋಸ್ಟ್ ಮತ್ತು ರೌಡಿ ಶೀಟರ್ ಗಳು ಬೇದರಿಕೆ, ಡೈಲಾಗ್ ಹಾಕುವ ವಿಡಿಯೋ ಹಂಚಿಕೊಂಡರೆ ಮುಲ್ಲಾಜಿಲ್ಲದೆ ಪೊಲೀಸರು ಕ್ರಮ ಕೈಗೊಳ್ಳಲು ಹದ್ದಿನ ಕಣ್ಣು ಇಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ನಿಲುವು ತಾಳಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು, ದ್ವೇಷಭಾಷಣ ಹಾಗೂ ರೌಡಿ ಶೀಟರ್‌ಗಳ ಬೆದರಿಕೆ ವಿಡಿಯೋಗಳ ಮೇಲೆ ನಿಗಾ ಇಡಲು ವಿಶೇಷ ಸೈಬರ್ ಸೆಲ್ ಕಾರ್ಯಾರಂಭ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಮಾಜದ ಶಾಂತಿ ಕದಡುವ ರೀತಿಯ ಪೋಸ್ಟ್‌ಗಳು, ಜಾತಿ-ಧರ್ಮದ ಹೆಸರಿನಲ್ಲಿ ಪ್ರಚೋದನೆ ಮೂಡಿಸುವ ಸಂದೇಶಗಳು ಹಾಗೂ ರೌಡಿ ಶೀಟರ್‌ಗಳು ತಮ್ಮ ಪ್ರಭಾವ ಪ್ರದರ್ಶಿಸಲು ಡೈಲಾಗ್, ಮಾರಕಾಸ್ತ್ರಗಳೊಂದಿಗೆ ವಿಡಿಯೋಗಳನ್ನು ಹರಿಬಿಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ.
ಈ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆ ತಾಂತ್ರಿಕ ನಿಗಾವನ್ನು ಬಲಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಪ್ರತಿಯೊಂದು ಅನುಮಾನಾಸ್ಪದ ಪೋಸ್ಟ್, ಸ್ಟೇಟಸ್ ಹಾಗೂ ವಿಡಿಯೋಗಳ ಮೇಲೆ ಕಣ್ಣಿಟ್ಟಿದೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವ ಅಥವಾ ಯುವಕರನ್ನು ತಪ್ಪು ದಾರಿಗೆಳೆಯುವ ರೀತಿಯ ವಿಷಯ ಹಂಚಿಕೊಂಡರೆ ಸಂಬಂಧಪಟ್ಟವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಸೆಲ್ ತಂಡವು 24 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದು, ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವುದೇ ಸುಳ್ಳು ಸುದ್ದಿ ಅಥವಾ ಪ್ರಚೋದನಕಾರಿ ವಿಷಯಗಳನ್ನು ಫಾರ್ವರ್ಡ್ ಮಾಡುವವರನ್ನೂ ಕೂಡ ಕಾನೂನು ವ್ಯಾಪ್ತಿಗೆ ತರಲು ಪೊಲೀಸರು ಮುಂದಾಗಿದ್ದಾರೆ.
