ಬೆಳಗಾವಿ ನಗರದ ಬಸವನ ಗಲ್ಲಿ ಪ್ರದೇಶದ ಸಮರ್ಥ ನಗರದಲ್ಲಿನ ಅಪಾರ್ಟ್ಮೆಂಟ್ ಗೆ ಹಗಲು ಹೊತ್ತಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಒಣ ಹಾಕಿರುವ ಬಟ್ಟೆಗಳನ್ನು ಕದಿಯಲು ಯತ್ನಿಸಿದ ಘಟನೆ ನಡೆದಿದೆ. ಇಡೀ ಘಟನೆ ಅಪಾರ್ಟ್ಮೆಂಟ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.

ಜೂನ್ 25 ರಂದು ಮಧ್ಯಾಹ್ನ 2.10 ರ ಸುಮಾರಿಗೆ, ಶಂಕಿತ ವ್ಯಕ್ತಿ ಅಪಾರ್ಟ್ಮೆಂಟ್ ಗೆ ಪ್ರವೇಶಿಸಿ ಎರಡನೇ ಮಹಡಿಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಬಳಿಕ ಒಣಗುತ್ತಿದ್ದ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ, ಯಾರೊ ಬಂದಿದ್ದನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯ ನಂತರ, ಅಪಾರ್ಟ್ಮೆಂಟ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ಅವಧೂತ್ ತುಡ್ವೇಕರ್ ಖಾಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ವಾಸಿಸುತ್ತಿರುವುದರಿಂದ, ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಸುರಕ್ಷತೆಗಾಗಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಶಂಕಿತನಿಗಾಗಿ ಹುಡುಕಾಟ ಆರಂಭಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
