ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇವತ್ತು ಹನ್ನೊಂದನೇ ನೀತಿ ಆಯೋಗದ ಆಡಳಿತ ಮಂಡಳಿ ಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಸಭೆಯಲ್ಲಿ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದು, ದೇಶದ ಪ್ರಗತಿಯ ಕುರಿತು ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಆರಂಭವಾಗಿರುವ ಈ ಪ್ರಮುಖ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ನೀತಿ ಆಯೋಗದ ಪದಾಧಿಕಾರಿಗಳು ಉಪಸ್ಥಿತರಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಹೊಸದಾಗಿ ಆಯ್ಕೆಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ, ತಮಿಳುನಾಡಿನ ಸಿ. ಜೋಸೆಫ್ ವಿಜಯ್ ಮತ್ತು ಕೇರಳದ ವಿ.ಡಿ. ಸತೀಶನ್ ಸೇರಿದಂತೆ ಹಲವು ರಾಜ್ಯಗಳ ಸಿಎಂಗಳ ದಂಡೇ ಸಭೆಯಲ್ಲಿ ಹಾಜರಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ 5ನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದ ಶಿಫಾರಸುಗಳ ಮೇಲೂ ಈ ಸಭೆಯಲ್ಲಿ ಪ್ರಮುಖವಾಗಿ ಗಮನ ಹರಿಸಲಾಗುತ್ತಿದೆ.

ಈ ಬಾರಿಯ ನೀತಿ ಆಯೋಗದ ಸಭೆಯು ಮುಖ್ಯವಾಗಿ ‘ವಿಕಸಿತ ಭಾರತ 2047ಕ್ಕೆ ಸಮಗ್ರ ಮಾನವ ಅಭಿವೃದ್ಧಿ’ ಎಂಬ ಧ್ಯೇಯದೊಂದಿಗೆ ನಡೆಯುತ್ತಿದ್ದು, ದೇಶಾದ್ಯಂತ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಸುಸ್ಥಿರ ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವ ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದಾರೆ. ಮಾನವ ಬಂಡವಾಳ, ಉತ್ಪಾದಕ ಉದ್ಯೋಗ, ಆರೋಗ್ಯ-ಪೋಷಣೆ ಹಾಗೂ ಎಲ್ಲರಿಗೂ ಸಮಾನತೆ ಎಂಬ ನಾಲ್ಕು ಪ್ರಮುಖ ಸ್ತಂಭಗಳ ಆಧಾರದ ಮೇಲೆ ಈ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಇದರೊಂದಿಗೆ ಡಿಜಿಟಲ್ ಸಾರ್ವಜನಿಕ ಸೌಕರ್ಯ, ಉತ್ತಮ ಆಡಳಿತ ಮತ್ತು ಸುಸ್ಥಿರ ಬೆಳವಣಿಗೆಯ ಕಡೆಗೆ ಜಂಟಿ ಕಾರ್ಯವಿಧಾನವನ್ನು ಬಲಪಡಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.
