ಬೆಳಗಾವಿಯ ಛತ್ರಪತಿ ಧರ್ಮವೀರ ಸಂಭಾಜಿ ಮಹಾರಾಜರ ಸ್ಮಾರಕ ಹಾಗೂ ಶಂಭುತೀರ್ಥದ ಹಿಂಭಾಗದಲ್ಲಿ ಉಂಟಾಗಿರುವ ಅಸ್ವಚ್ಛತೆಯ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಮುಂದಿನ ಐದಾರು ದಿನಗಳಲ್ಲಿ ಈ ಜಾಗವನ್ನು ಸ್ವಚ್ಛಗೊಳಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಎಚ್ಚರಿಕೆ ನೀಡಿದೆ.


ಹಿಂದೂಸ್ಥಾನದ ಆರಾಧ್ಯ ದೈವವಾಗಿರುವ ಛತ್ರಪತಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿಯ ಹಿಂಭಾಗದಲ್ಲಿನ ಪರಿಸರ ದಿನದಿಂದ ದಿನಕ್ಕೆ ಅತ್ಯಂತ ಕಲುಷಿತಗೊಳ್ಳುತ್ತಿದ್ದು, ಅಸ್ವಚ್ಛತೆಯ ಪ್ರಶ್ನೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇತಿಹಾಸ ಪ್ರಸಿದ್ಧ ಶಂಭುತೀರ್ಥದ ಹಿಂಭಾಗದ ಪ್ರದೇಶವು ಸದ್ಯ ಮಲ-ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದ್ದು, ರಾತ್ರಿ ವೇಳೆ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ ಎಂದು ಶಿವಸೇನಾ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪವಿತ್ರ ಸ್ಮಾರಕದ ಆವರಣದ ಘನತೆಯನ್ನು ಕಾಪಾಡಲು ಸಂಬಂಧಪಟ್ಟ ಮಹಾನಗರ ಪಾಲಿಕೆ ಹಾಗೂ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಉಪಜಿಲ್ಲಾ ಪ್ರಮುಖ್ ಬಂಡು ಕೇರವಾಡ್ಕರ್ ಒತ್ತಾಯಿಸಿದ್ದಾರೆ. ಒಂದು ವೇಳೆ ಮುಂದಿನ ಐದಾರು ದಿನಗಳಲ್ಲಿ ಈ ಭಾಗದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕದಿದ್ದರೆ, ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ತೀವ್ರ ಸ್ವರೂಪದ ಜನಾಂದೋಲನ ಹಾಗೂ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
