ಬೆಳಗಾವಿಯ ಸದಾಶಿವ ನಗರದ ಒನ್ನೆಸ್ ಪ್ರೈಡ್ ಕಟ್ಟಡದಲ್ಲಿ ‘ಕಾಮಾಖ್ಯಾ ಡಯಾಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ’ದ ನೂತನ ಸುಸಜ್ಜಿತ ಕಟ್ಟಡದ ಉದ್ಘಾಟನಾ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿತು.


ಬೆಳಗಾವಿಯ ಸದಾಶಿವ ನಗರದ ಒನ್ನೆಸ್ ಪ್ರೈಡ್ ಕಟ್ಟಡದಲ್ಲಿ ಕಾಮಾಖ್ಯಾ ಡಯಾಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯದ ನೂತನ ಸುಸಜ್ಜಿತ ಕಟ್ಟಡದ ಉದ್ಘಾಟನಾ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿತು. ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಡಿಸಿಪಿ ನಾರಾಯಣ ಭರಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಐ. ಪಿ. ಗಡಾದ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸರ್ಕಾರಿ ಮುಖ್ಯ ಸಚೇತಕರು ಮತ್ತು ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಪಾಲ್ಗೊಂಡು ಸಂಸ್ಥೆಯ ಸೇವೆಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಆತಿಥೇಯರಾದ ಸಂಸ್ಥೆಯ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್ ಕವೀಶ್ವರ, ನಿರ್ದೇಶಕರಾದ ಅನಿಲ ಪಾಟೀಲ, ಎಂ.ಡಿ ಪ್ಯಾಥಾಲಜಿಸ್ಟ್ ಡಾ. ಪ್ರೀತಿ ಎಸ್. ಮೇದಾರ ಹಾಗೂ ಡಾ. ಬಾಬುರಾವ್ ಗೋಗಲೆ ಉಪಸ್ಥಿತರಿದ್ದರು.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು ಮಾತನಾಡಿ ಇತ್ತಿಚೇಗೆ ಹೊಸ ಹೊಸ ವೈರಸ್’ಗಳು ಉತ್ಪತ್ತಿಯಾಗುತ್ತಿದ್ದು, ಅವುಗಳನ್ನು ಪರದೇಶಕ್ಕೆ ಹೋಗಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆ ಜನರು ಜಾಗೃತರಾಗುತ್ತಿದ್ದಾರೆ. ಜನರ ರೋಗವನ್ನು ನಮ್ಮ ದೇಶದಲ್ಲೇ ಪತ್ತೆ ಹಚ್ಚುವ ಒಂದು ಕಾರ್ಯವನ್ನು ಕಾಮಾಖ್ಯಾ ಸಂಸ್ಥೆಯೂ ಮಾಡುತ್ತಿದೆ. ಸಮಾಜಕ್ಕೆ ಉಪಯೋಗಿ ಆಗುವಂತಹ ಬಡ ಮಧ್ಯಮ ವರ್ಗದ ಜನರ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತಿರುವುದು ಸಂತೋಷದ ವಿಷಯ ಎಂದರು.

ಈ ವೇಳೆ ಮಾತನಾಡಿದ ಡಿಸಿಪಿ ನಾರಾಯಣ್ ಬರಮನಿ ಅವರು ಈ ಸಂಸ್ಥೆಯಲ್ಲಿ ಗುಣಮಟ್ಟದ ತಪಾಸಣೆಯನ್ನು ನಡೆಸಿ, ಸಕಾಲದಲ್ಲಿ ವರದಿ ಸಿಗಲಿದೆ. ರೋಗಿಗಳ ಕೈಗೆಟಕುವ ದರದಲ್ಲಿ ಸೇವೆಯನ್ನು ಈ ಸಂಸ್ಥೆಯೂ ಒದಗಿಸುತ್ತಿರುವುದು ಪ್ರಶಂಸನೀಯ. ಆರೋಗ್ಯವನ್ನೇ ಮನೆ ಬಾಗಿಲಿಗೆ ಒದಗಿಸುತ್ತಿರುವುದು ಇನ್ನೊಂದು ವಿಶೇಷ ಎಂದರು.

ಡಾ. ಈಶ್ವರ ಗಡಾದ್ ಅವರು ಮಾತನಾಡಿ ಹೊಸ ಹೊಸ ವೈರಸ್’ಗಳು ಉಲ್ಭಣಗೊಂಡಿದ್ದು, ತಂತ್ರಜ್ಞಾನ ಮುಂದುವರೆದಿದ್ದು ಅವುಗಳನ್ನು ಪತ್ತೆ ಹಚ್ಚಲು ನೂತನ ಆವಿಷ್ಕಾರಗಳನ್ನು ಮಾಡಲಾಗಿದೆ. ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಕೂಡ ಆರೋಗ್ಯ ಸೇವೆಯನ್ನು ನೀಡುತ್ತಿವೆ. ಈ ಸಂಸ್ಥೆಯೂ ಬಡ ಮಧ್ಯಮ ಜನರ ಕೈಗೆಟಕುವ ದರದಲ್ಲಿ ಉತ್ತಮ ಸೇವೆಯನ್ನು ನೀಡಿದ್ದು, ಉತ್ತರೋತ್ತರ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಅವರು, ಪ್ರಸ್ತುತ 21ನೇ ಶತಮಾನದಲ್ಲಿ ಆರೋಗ್ಯವು ಮಹತ್ವ ಸ್ಥಾನವನ್ನು ಗಳಿಸಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಸರ್ಕಾರಗಳು ಜಾರಿಗೆ ತಂದ ಆರೋಗ್ಯ ಯೋಜನೆಗಳ ಮಾಹಿತಿಯನ್ನು ನೀಡಿದರು. ರೋಗಗಳನ್ನು 24 ಗಂಟೆಗಳ ಕಾಲ ಪರೀಕ್ಷಿಸಲು ಪ್ರಯೋಗಾಲಯವನ್ನು ಸ್ಥಾಪಿಸಿರುವುದು ಸಾಮಾನ್ಯ ಜನರ ಆರೋಗ್ಯ ಸೇವೆಯ ಮೇಲಿನ ಭರವಸೆಯನ್ನು ಹೆಚ್ಚಿಸಿದೆ ಎಂದರು.

ನಿರ್ದೇಶಕರಾದ ಅನಿಲ ಪಾಟೀಲ ಅವರು ಇದೊಂದು ಕೇವಲ ಪ್ರಯೋಗಾಲಯ ಉದ್ಘಾಟನೆಯ ದಿನವಲ್ಲದೇ, ಆರೋಗ್ಯ ಸೇವೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ ದಿನವಾಗಿದೆ. ಕಾಮಾಖ್ಯಾ ಲಾಬ್ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿಖರ ಪರೀಕ್ಷೆಗಳನ್ನು ನಡೆಸಿ, ಜನರ ಆರೋಗ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತ ಹೊಸ ದಿಕ್ಕನ್ನು ತೋರಿಸುತ್ತಿದೆ. ಅತ್ಯುನ್ನತ ಪರೀಕ್ಷೆಗಳು ಮತ್ತು ಜನರ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ನಮ್ಮ ಗುರಿಯಾಗಿದೆ. ಅಲ್ಲದೇ ನಮ್ಮ ಸಂಸ್ಥೆಯಿಂದ ಹೆಲ್ತ್ ಕಾರ್ಡ್’ನ್ನು ಕೂಡ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ವಿವಿಧ ಗಣ್ಯರು ಇನ್ನುಳಿದವರು ಉಪಸ್ಥಿತರಿದ್ಧರು.

