ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ, ಮೇ 26ರ ಮಂಗಳವಾರದಂದು ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಕನ್ನಡ ಪರ ಸಂಘಟನೆಗಳು ಬೃಹತ್ ಸಿದ್ಧತೆ ನಡೆಸಿವೆ. ನಾಡಿನ ಹಿರಿಯ ಹೋರಾಟಗಾರರಾದ ವಾಟಾಳ್ ನಾಗರಾಜ್ ಸೇರಿದಂತೆ ಪ್ರಮುಖರು ಈ ಹೋರಾಟಕ್ಕೆ ಧುಮುಕಲಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಹಾಗೂ “ಗಡಿ ವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ” ಎನ್ನುವ ಒಮ್ಮತದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿ ಕಳೆದ ಮಾರ್ಚ್ 26 ರಿಂದ ನಡೆಯುತ್ತಿರುವ ಹೋರಾಟ ಈಗ ಕ್ರಾಂತಿಕಾರಿ ರೂಪ ಪಡೆದಿದೆ. ಇದರ ಭಾಗವಾಗಿ ಬರುವ ಮಂಗಳವಾರ (ಮೇ 26) ದಂದು ಹಿರಿಯ ಕನ್ನಡ ಚಳವಳಿಗಾರರಾದ ವಾಟಾಳ್ ನಾಗರಾಜ, ಸಾ.ರಾ. ಗೋವಿಂದು, ಕೆ.ಆರ್. ಕುಮಾರ ಹಾಗೂ ಮಂಜುನಾಥ ದೇವ್ ಅವರ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಲಿದ್ದಾರೆ. ಅಂದು ಮುಂಜಾನೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಪುನರ್ ಸ್ಥಾಪಿತ ಹಲ್ಮಿಡಿ ಶಾಸನದ ಪ್ರತಿಕೃತಿಗೆ ಮಲಪ್ರಭೆ, ಘಟಪ್ರಭೆ ಸೇರಿದಂತೆ ಪಂಚನದಿಗಳ ಪವಿತ್ರ ಜಲ ಹಾಗೂ ಕ್ಷೀರಾಭಿಷೇಕ ನೆರವೇರಿಸಿ, ಪೂಜೆ ಸಲ್ಲಿಸಿದ ಬಳಿಕ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಕಿತ್ತೂರು ಕರ್ನಾಟಕ ಸೇನೆಯ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ಬಲರಾಮ ಮಾಸೇನಕರ್ ಹಾಗೂ ಕನ್ನಡ ಕ್ರಿಯಾ ಸಮಿತಿಯ ಅಶೋಕ ಚಂದರಗಿ ಅವರು ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿಗಳು ಮತ್ತು ಸಂಘ-ಸಂಸ್ಥೆಗಳು ಈ ಐತಿಹಾಸಿಕ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಜಂಟಿ ಮನವಿ ಮಾಡಿದ್ದಾರೆ.

