Accident

ಮಲಪ್ರಭಾ ನದಿ ಸೇತುವೆ ಬಳಿ ಬಸ್–ಕಾರು ಅಪಘಾತ: ಎಂಟು ಮಂದಿಗೆ ಗಾಯ

Share

ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪದ ಮಲಪ್ರಭಾ ನದಿ ಸೇತುವೆ ಹತ್ತಿರ ಭಾನುವಾರ ಸಾರಿಗೆ ಸಂಸ್ಥೆಯ ಬಸ್ ಹಾಗೂ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಮಾರು ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ.

ಬೈಲಹೊಂಗಲ ಘಟಕಕ್ಕೆ ಸೇರಿದ ಸಾರಿಗೆ ಸಂಸ್ಥೆಯ ಬಸ್ ಬೈಲಹೊಂಗಲದಿಂದ ಧಾರವಾಡ ಕಡೆಗೆ ತೆರಳುತ್ತಿತ್ತು. ಇದೇ ವೇಳೆ ಬೆಳವಡಿ ಕಡೆಯಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದ ಕಾರಿನೊಂದಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಕಾರಿನ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಕೂಡ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಸುಮಾರು ಎಂಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಸ್ಥಳಕ್ಕೆ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ. ಭಾನುಪ್ರಕಾಶ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:

error: Content is protected !!