Belagavi

ಭಾಷೆಯು ಬದುಕಿನ ಅನುಭವದ ಜೀವಾಳ : ಚಿಂತಕ ಲಕ್ಷ್ಮೀಶ ತೋಳ್ಪಾಡಿ

Share

• ಭಾಷೆ ಬದುಕಿನ ಅನುಭವದ ಜೀವಂತ ಪದಾರ್ಥ
• ಸೃಜನಶೀಲತೆ ಅರಳಲು ಬೇಕು ಭಾಷೆಯ ಕಾಳಜಿ
• ಸಾಹಿತ್ಯ ತತ್ವಜ್ಞಾನದ ನಡುವೆ ಭಾಷೆಯೇ ಸೇತುವೆ
• ಸಹಜ ಬದುಕಿಗೆ ಬೇಕಿದೆ ಇಂದು ಆತ್ಮಾವಲೋಕನ

ಭಾಷೆ ಎನ್ನುವುದು ಒಂದು ಜೀವಂತ ಪದಾರ್ಥ. ಅದು ನಮ್ಮ ಜೀವನದ ಪ್ರತಿ ಅನುಭವದ ಜೀವಾಳ, ಅದನ್ನು ಬಹಳ ಮುತುವರ್ಜಿಯಿಂದ ಮನಸ್ಸಿನಿಂದ ಬಳಸಬೇಕು. ತಾಂತ್ರಿಕವಾಗಿ ಭಾಷೆಯನ್ನು ಬಳಸುವುದರಿಂದ ಸೃಜನಶೀಲತೆ ಅರಳುವುದಿಲ್ಲ ಎಂದು ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘ, ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕನ್ನಡ ಸಾಹಿತ್ಯ: ಮೌಲ್ಯ” ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸಾಹಿತ್ಯ ಮತ್ತು ತತ್ವಜ್ಞಾನಕ್ಕೆ ಸಮಾನವಾದ ಸ್ಥಾನವಿದೆ. ಭಾಷೆಯು ಇವೆರಡರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ ಮತ್ತು ಅದರ ಪ್ರತಿ ಅಕ್ಷರವೂ ನಮಗೆ ಆಧಾರವಾಗಿದೆ ಎಂದು ಹೇಳಿದರು. ಮಾತಿನ ಶಕ್ತಿ ಅಥವಾ ಶಬ್ದದ ಅರ್ಥ ತುಂಬಾ ದೊಡ್ಡದು. ನಾವು ಒಂದು ವಿಷಯವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು. ಪ್ರಕೃತಿ ನೀಡಿದ ಜೀವನ ಸರಳವಾದದ್ದು; ಅದಕ್ಕೆ ಕೃತಕತೆಯ ಬಣ್ಣ ಹಚ್ಚಿ ಅಸಹಜವಾಗಿಸಿಕೊಳ್ಳದೆ, ಅದರ ಸಹಜತೆಯನ್ನು ಆಸ್ವಾದಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಮಾತನಾಡಿ, ‘ಇಂದಿನ ದಿನಗಳಲ್ಲಿ ನಾವು ಸಹಜತೆಯನ್ನು ಮರೆತು ಕೃತಕ ಬುದ್ಧಿಮತ್ತೆಯ ಹಿಂದೆ ಓಡುತ್ತಿದ್ದೇವೆ. ನಮ್ಮ ಮನಸ್ಸು ಮತ್ತು ಬದುಕಿನ ಅಂತರಾಳವನ್ನು ಶೋಧಿಸಿಕೊಳ್ಳುವ ಅನಿವಾರ್ಯತೆ ನಮಗಿದೆ. ಅಂತಹ ಆತ್ಮಾವಲೋಕನದ ಹಾದಿಯನ್ನು ತೋರಿದ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ವಿಶ್ವವಿದ್ಯಾಲಯವು ಸದಾ ಕೃತಜ್ಞವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಂಘದ ಅಧ್ಯಕ್ಷ, ಡಾ. ಗಜಾನನ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಮತ್ತು ಬರಹಗಾರ ಪ್ರೊ. ಎಸ್ ಎಸ್. ಅಂಗಡಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ಗಂಗಾಧರ , ಕನ್ನಡ ಸಂಘದ ಸದಸ್ಯ ಕಾರ್ಯದರ್ಶಿ ಡಾ. ಹನುಮಂತಪ್ಪ ಸಂಜೀವಣ್ಣನವರ, ಉಪಾಧ್ಯಕ್ಷರಾದ ಡಾ. ಕನಕಪ್ಪ ಪೂಜಾರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!