ಬೆಳಗಾವಿ ಶಿವಬಸವನಗರ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಕಳೆದ ೨೬ ವರ್ಷಗಳಿಂದ ಮಾಸಿಕವಾಗಿ ಜರುಗುತ್ತ ಬಂದ ಶಿವಾನುಭವ ಕಾರ್ಯಕ್ರಮದ ೩೦೦ನೇ ವಿಶೇಷ ಕಾರ್ಯಕ್ರಮವು ಸೋಮವಾರ ದಿನಾಂಕ ೧ ಜೂನ್ ೨೦೨೬ರಂದು ಸಾಯಂಕಾಲ ೬ ಗಂಟೆಗೆ ಜರುಗುವುದು.

ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಖಡಕಲಾಟ ಕುಮಾರೇಶ್ವರ ವಿರಕ್ತಮಠದ ಪೂಜ್ಯ ಶ್ರೀಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳವರು ವಹಿಸುವರು. ಕಾರಂಜಿಮಠದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ಯುವಯತಿಗಳೂ ವಾಗ್ನಿಗಳೂ ಆದ ತಾಳಿಕೋಟಿ ಖಾಸತೇಶ್ವರಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಸಿದ್ಧಲಿಂಗ ದೇವರು ವಿಶೇಷ ಉಪನ್ಯಾಸ ನೀಡುವರು. ಶ್ರೀ ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳಿಂದ ಪ್ರಾರ್ಥನೆ ಜರುಗುವುದು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

