ಬಾಗಲಕೋಟೆ ಉಪಚುನಾವಣೆಯ ಅಖಾಡ ಈಗ ಹೈವೋಲ್ಟೇಜ್ ಆಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ ಮೊದಲ ಬಾರಿಗೆ ಫೈರ್ ಬ್ರಾಂಡ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಖಾಡಕ್ಕಿಳಿದಿದ್ದಾರೆ. ಅಚ್ಚರಿಯೆಂದರೆ, ಯಾವುದೇ ಪಕ್ಷದ ಶಾಲು ಅಥವಾ ಚಿಹ್ನೆ ಇಲ್ಲದ ವೇದಿಕೆಯಲ್ಲಿ ಯತ್ನಾಳ್ ನಡೆಸಿದ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಘಟಾನುಘಟಿ ನಾಯಕರು ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಪ್ರಚಾರದ ಕಾವು ಏರುತ್ತಿದ್ದಂತೆ, ಬಸವನಗೌಡ ಪಾಟೀಲ್ ಯತ್ನಾಳ್ ಅವರ ಎಂಟ್ರಿಯು ಚುನಾವಣಾ ಚಿತ್ರಣವನ್ನೇ ಬದಲಿಸಿದೆ. ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಮುಖಂಡರ ಪ್ರಚಾರ ಸಭೆಯಲ್ಲಿ ಯತ್ನಾಳ್ ಪಾಲ್ಗೊಂಡಿದ್ದರು. ವಿಶೇಷವೆಂದರೆ, ಪಕ್ಷದ ಯಾವುದೇ ಬ್ಯಾನರ್ ಅಥವಾ ಶಾಲು ಬಳಸದೆಯೇ ಬಿಜೆಪಿ ಅಭ್ಯರ್ಥಿ ಪರ ಅವರು ಬ್ಯಾಟಿಂಗ್ ಮಾಡಿದ್ದು, ಅವರ ವೈಯಕ್ತಿಕ ವರ್ಚಸ್ಸಿಗೆ ರಾಜ್ಯ ಬಿಜೆಪಿ ನಾಯಕರು ಶರಣಾದಂತೆ ಕಂಡುಬಂದಿತು. ಈ ಸಭೆಯು ಯತ್ನಾಳ್ ಅವರ ಶಕ್ತಿ ಪ್ರದರ್ಶನದಂತಿದ್ದು, ಮುಂಬರುವ ಚುನಾವಣಾ ಫಲಿತಾಂಶದ ಮೇಲೆ ಇದು ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಯಿದೆ.
ಯತ್ನಾಳ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಮಾಜಿ ಸಚಿವ ಸಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಕೆಎಲ್ ಇ ಸಂಸ್ಥೆಯ ಪ್ರಭಾಕರ ಕೋರೆ, ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಸಿದ್ದು ಸವದಿ, ಶರಣು ಸಲಗಾರ್ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಆದರೆ, ಹಿರಿಯ ನಾಯಕ ಗೋವಿಂದ ಕಾರಜೋಳ ಅವರ ಗೈರು ಹಾಜರಿ ಸಭೆಯಲ್ಲಿ ಎದ್ದುಕಾಣುತ್ತಿತ್ತು. ಯತ್ನಾಳ್ ಅವರ ಈ ನಡೆ ಬಾಗಲಕೋಟೆಯಲ್ಲಿ ಬಿಜೆಪಿಯ ಗೆಲುವಿನ ಹಾದಿಯನ್ನು ಸುಲಭಗೊಳಿಸುತ್ತದೆಯೇ ಎಂಬುದು ಈಗ ಎಲ್ಲರ ಗಮನ ಸೆಳೆದಿರುವ ಪ್ರಶ್ನೆಯಾಗಿದೆ.
