BELAGAVI

ತುರಮುರಿ ಕಚರಾ ಡಿಪೋಗೆ ವಿರೋಧಿಸಿ ತಾಳ ಮೃದಂಗದೊಂದಿಗೆ ಗ್ರಾಮಸ್ಥರ ವಿನೂತನ ಪ್ರತಿಭಟನೆ

Share

ಬೆಳಗಾವಿ ತಾಲೂಕಿನ ತುರಮುರಿ ಗ್ರಾಮಸ್ಥರು ನರಕ ಸದೃಶ್ಯ ಬದುಕಿನ ವಿರುದ್ಧ ಬೀದಿಗಿಳಿದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯದಿಂದ ಹೈರಾಣಾಗಿರುವ ಸಾವಿರಾರು ಗ್ರಾಮಸ್ಥರು, ಇಂದು ತಾಳ-ಮೃದಂಗಗಳನ್ನು ಬಾರಿಸುತ್ತಾ ವಿನೂತನವಾಗಿ ಪ್ರತಿಭಟಿಸಿ, ಕಸದ ಘಟಕವನ್ನು ಕೂಡಲೇ ಬಂದ್ ಮಾಡುವಂತೆ ಆಗ್ರಹಿಸಿದರು.

ಬೆಳಗಾವಿ ತಾಲೂಕಿನ ತುರಮುರಿಯಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕವನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ ಇಂದು ತಾಳ ಮೃದಂಗಗಳನ್ನು ಬಾರಿಸುತ್ತ ವಿನೂತನವಾಗಿ ಸಹಸ್ರಾರು ಗ್ರಾಮಸ್ಥರು ಬೆಳಗಾವಿಯಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು.

ಬೆಳಗಾವಿ ನಗರದ ತ್ಯಾಜ್ಯವನ್ನು ಬೆಳಗಾವಿಯ ತುರಮುರಿಗೆ ತಂದು ಸುರಿಯುತ್ತಿದ್ದು, ಇದರಿಂದ ಕಳೆದ 10ಕ್ಕೂ ಅಧಿಕ ವರ್ಷಗಳಿಂದ ಗ್ರಾಮಸ್ಥರು ವನವಾಸವನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಗ್ರಾಮದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು,ಮಕ್ಕಳು ವೃದ್ಧರೂ ಎಲ್ಲರಿಗೂ ತೊಂದರೆಯಾಗುತ್ತಿದೆ. ಮನೆಯಲ್ಲಿ ಕುಳಿತು ಊಟ ಮಾಡುವುದು ಕೂಡ ಬೇಡವಾಗಿದೆ. ದುರ್ನಾತಕ್ಕೆ ನರಕ ಸದೃಶ್ಯ ವಾತಾವರಣ ಸೃಷ್ಠಿಯಾಗಿದೆ. ಮಕ್ಕಳಿಗೆ ರೋಗದ ಭೀತಿ ಎದುರಾಗಿದೆ. ಕೊಳಚೆ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ಭೂಮಿಯಲ್ಲಿ ಇಂಗಿ ಕೊಳವೆ ಭಾವಿಗಳು ಹಾಳಾಗುತ್ತಿವೆ. ನಮಗೆ ಬೆಳಗಾವಿ ನಗರದ ಕಸ ಬೇಡ. ಅದನ್ನ ಬೆಳಗಾವಿಯಲ್ಲಿಯೇ ವಿಲೇವಾರಿ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಜ್ಯ ವಿಲೇವಾರಿ ಘಟಕದಲ್ಲಿ ಹೆಚ್ಚಿದ ನಾಯಿಗಳು ಹೊಲಗದ್ದೆಗಳಿಗೆ ಹೋಗುವಾಗ ಹಲ್ಲೆ ನಡೆಸುತ್ತಿವೆ. ನಡೆದಾಡುವಾಗ ಕೊಳಚೆ ನೀರು ದೇಹಕ್ಕೆ ತಗುಲಿ ಚರ್ಮದ ರೋಗದ ಭೀತಿ ಎದುರಾಗಿದೆ. ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಗ್ರಾಮಸ್ಥರ ಅನುಮತಿಯನ್ನು ಪಡೆಯದೇ ಜಿಲ್ಲಾಡಳಿತವು ಜನವಸತಿಯಲ್ಲಿ ಪ್ರದೇಶದಲ್ಲಿ ಕಚರಾ ಡಿಪೋ ನಿರ್ಮಿಸಿ ನಮ್ಮ ಮೇಲೆ ಅನ್ಯಾಯ ಮಾಡಿದೆ. ಕಳೆದ 20 ಕ್ಕೂ ಹೆಚ್ಚು ವರ್ಷಗಳಿಂದ ತುರಮುರಿಯ ಗ್ರಾಮಸ್ಥರ ತಲೆಯ ಮೇಲೆ ಕಸವನ್ನು ಹೇರುತ್ತಿರುವ ನೀತಿಯನ್ನು ಜಿಲ್ಲಾಡಳಿತವು ನಿಲ್ಲಿಸಬೇಕು. ತುರಮುರಿಯಲ್ಲಿನ ಕಚರಾ ಡಿಪೋ ಬಂದ್ ಮಾಡಿ ಇಲ್ಲದಿದ್ದರೇ, ಎಲ್ಲ ಜನಪ್ರತಿನಿಧಿಗಳು ತಮ್ಮ ಕುರ್ಚಿಗಳನ್ನು ಖಾಲಿ ಮಾಡಲಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಕುರಿತಾದ ಮನವಿಯನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ನೀಡಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ನಾವು ಯಾವತ್ತೂ ಜನಹಿತದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾಡುತ್ತೇವೆ. ದೊಡ್ಡಮಟ್ಟದ ಈ ಕಚರಾ ಡಿಪೋ ಸ್ಥಳಾಂತರಿಸಲು ಪರ್ಯಾಯ ಜಾಗೆಯನ್ನು ಹುಡುಕಬೇಕು. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕು. ಗ್ರಾಮಸ್ಥರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಸದ್ಯಕ್ಕೆ ಅಲ್ಲಿನ ಕಾಮಗಾರಿಯನ್ನು ತಡೆ ಹಿಡಿಯಲಾಗುವುದು ಎಂದು ಆಶ್ವಾಸನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುರಮುರಿಯ ಗ್ರಾಮಸ್ಥರು ಭಾಗಿಯಾಗಿದ್ಧರು.

Tags:

error: Content is protected !!