ವಿಜಯಪುರ ನಗರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಸಂಭವಿಸಿದ ದಾರುಣ ಘಟನೆಗೆ ಮೂವರು ಬಲಿಯಾಗಿದ್ದಾರೆ. ಪ್ರವಾಸಕ್ಕಾಗಿ ಬೆಂಗಳೂರಿನಿಂದ ಕುಟುಂಬ ಸಮೇತ ವಿಜಯಪುರಕ್ಕೆ ಬಂದಿದ್ದ ತಂಡದವರು ಕೆರೆ ವೀಕ್ಷಣೆ ವೇಳೆ ಈ ಅವಘಡ ನಡೆದಿದೆ.


ಬೆಂಗಳೂರಿನ ಆರ್ ಟಿ ನಗರ ನಿವಾಸಿಗಳಾದ ಮಹಮ್ಮದ್ ಹಯಾತ್ (12), ಹೈದರ್ ಪಾಶಾ (32) ಹಾಗೂ ಅಬ್ದುಲ್ ಖುದ್ದುಸ್ (35) ಮೃತರಾಗಿದ್ದಾರೆ. ಒಟ್ಟು 14 ಜನರ ತಂಡ ವಿಜಯಪುರಕ್ಕೆ ಪ್ರವಾಸಕ್ಕೆ ಆಗಮಿಸಿದ್ದು, ಕೆರೆಯ ಬಳಿ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ನೀರಿನಲ್ಲಿ ಇಳಿದಿದ್ದ ಬಾಲಕ ಹೈದರ್ ಪಾಶಾ ಮುಳುಗುತ್ತಿದ್ದಂತೆ, ಆತನ ರಕ್ಷಣೆಗೆ ಅಬ್ದುಲ್ ಖುದ್ದುಸ್ ಹಾಗೂ ಮತ್ತೊಬ್ಬರು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಆದರ್ಶ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ನೀರಿನಿಂದ ಹೊರತೆಗೆದರು. ಬಾಲಕ ಮಹಮ್ಮದ್ ಹಯಾತ್ ಹಾಗೂ ಹೈದರ್ ಪಾಶಾ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಅಬ್ದುಲ್ ಖುದ್ದುಸ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮೃತದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
