ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಅನುಭವವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಸರಣಿ ಭೂಕಂಪಗಳ ನೆಲೆಯಾಗಿ ಪರಿಣಮಿಸುತ್ತಿರುವ ವಿಜಯಪುರದಲ್ಲಿ ಇಂದು ಬೆಳಿಗ್ಗೆ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಿಗ್ಗೆ ಸರಿಯಾಗಿ 8.21 ಗಂಟೆಗೆ ಏಕಾಏಕಿ ಭೂಮಿ ಕಂಪಿದಂತೆ ಅನಿಸಿದ್ದು, ಜನರು ಭಯಭೀತರಾಗಿ ಮನೆಗಳ ಹೊರಗೆ ಓಡಿಬಂದ ಘಟನೆಗಳು ವರದಿಯಾಗಿವೆ. ತಿಕೋಟ, ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಹಟ್ಟಿ, ಹಬನೂರು, ಟಕ್ಕಳಕಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪನದ ಅನುಭವ ಕಂಡುಬಂದಿದೆ. ಜೊತೆಗೆ ಮಹಾರಾಷ್ಟ್ರ ಗಡಿ ಭಾಗಗಳಾದ ಮೊರಬಗಿ ಹಾಗೂ ತಿಕ್ಕುಂಡಿ ಗ್ರಾಮಗಳಲ್ಲಿಯೂ ಭೂಮಿ ಕಂಪಿದ ಅನುಭವ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನಗಳು ಕಂಡುಬರುತ್ತಿರುವುದು ಜನರಲ್ಲಿ ಹೆಚ್ಚುವರಿ ಆತಂಕಕ್ಕೆ ಕಾರಣವಾಗಿದೆ. ಆದರೆ, ಈ ಭೂಕಂಪನದ ತೀವ್ರತೆ ಹಾಗೂ ಕೇಂದ್ರಬಿಂದು ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಭೂಕಂಪನ ಸಂಭವಿಸಿದ ಕುರಿತು ಜಿಲ್ಲಾಡಳಿತದಿಂದ ದೃಢೀಕರಣ ನಿರೀಕ್ಷೆಯಿದೆ..
