Kagawad

ಆಟೋ ಚಾಲಕನ ಕೊಲೆ ಮಾಡಿ ನಾಟಕವಾಡಿದ್ದ ಕಿರಾತಕರು ಈಗ ಪೊಲೀಸರ ಅತಿಥಿ!

Share

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ನಡೆದ ಆಟೋ ಚಾಲಕನ ಭೀಕರ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿನಿಮಾ ಸ್ಟೈಲ್‌ನಲ್ಲಿ ಕೊಲೆ ಮಾಡಿ, ಪೊಲೀಸರನ್ನೇ ದಿಕ್ಕು ತಪ್ಪಿಸಲು ಸಂಚು ರೂಪಿಸಿದ್ದ ಮೂವರು ಆರೋಪಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಕೇವಲ ಆಟೋ ನಂಬರ್ ಹಚ್ಚುವ ಸಣ್ಣ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕಿರಾತಕರು ಆಟೋ ಚಾಲಕ ಅಶೋಕ ವಡ್ಡರ ಎಂಬುವವನ ತಲೆಗೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಹೆದರದ ಆರೋಪಿಗಳಾದ ಶಿವಾ, ಸಾಗರ ಮತ್ತು ವಿನೋದ, ತಾವೇ ಪೊಲೀಸ್ ಠಾಣೆಗೆ ತೆರಳಿ ‘ಅಲ್ಲಿ ಗಲಾಟೆ ನಡೆಯುತ್ತಿದೆ’ ಎಂದು ದೂರು ನೀಡುವ ಮೂಲಕ ಪೊಲೀಸರಿಗೆ ಮಂಕುಬೂದಿ ಎರಚಲು ಯತ್ನಿಸಿದ್ದರು.

ಮೃತನ ಕುಟುಂಬಸ್ಥರಿಗಿಂತ ಮುಂಚಿತವಾಗಿ ಆರೋಪಿಗಳೇ ದೂರು ನೀಡಲು ಬಂದಿದ್ದನ್ನು ಕಂಡು ಸಂಶಯಗೊಂಡ ಬೆಳಗಾವಿ ಪೊಲೀಸರು, ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಸದ್ಯ ಮೂವರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ಅಟ್ಟಲಾಗಿದೆ. ಈ ಕುರಿತು ಬೆಳಗಾವಿ ಎಸ್ಪಿ ರಾಮರಾಜನ್ ಅವರು ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣದ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ.

Tags:

error: Content is protected !!