ಭಾರತ ಸರ್ಕಾರದ ಗೃಹ ಮಂತ್ರಾಲಯದ ವತಿಯಿಂದ 2027ರ ಜನಗಣತಿಯ ಮೊದಲ ಹಂತವಾಗಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿಯ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಮನೆಪಟ್ಟಿ ಮತ್ತು ಮನೆ ಗಣತಿ ಕಾರ್ಯಕ್ಕೂ ಮುನ್ನ 15 ದಿನಗಳ ಕಾಲ ಸಾರ್ವಜನಿಕರಿಗೆ ‘ಸ್ವಯಂ ಗಣತಿ’ಗಾಗಿ ವಿಶೇಷ ಸೌಕರ್ಯವನ್ನು ಒದಗಿಸಲಾಗುತ್ತಿದೆ. ಈ ಅವಧಿಯಲ್ಲಿ ನಾಗರಿಕರು ತಮ್ಮ ವಿವರಗಳನ್ನು ಆನ್ಲೈನ್ ಮೂಲಕ ತಾವೇ ಭರ್ತಿ ಮಾಡಲು ಅವಕಾಶವಿದೆ.

ಕಾಗವಾಡದಲ್ಲಿ ‘ನಮ್ಮ ಜನಗಣತಿ ನಮ್ಮ ಅಭಿವೃದ್ಧಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರು, ಜನಗಣತಿ ಕಾರ್ಯಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶುಕ್ರವಾರ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ತಾಲೂಕಿನ 329 ಶಿಕ್ಷಕರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನುರಿತ ಹತ್ತು ಜನ ತರಬೇತುದಾರರಿಂದ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಯಿತು.
ಕಾಗವಾಡ ತಾಲೂಕಿನ 329 ಶಿಕ್ಷಕರಿಗೆ ಸ್ವಯಂ ಗಣತಿ ಮಾಡುವ ವಿಧಾನದ ಬಗ್ಗೆ ತರಬೇತುದಾರರು ಮಾಹಿತಿ ನೀಡಿದರು. ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ (OTP) ಮೂಲಕ ಲಾಗಿನ್ ಆಗಬೇಕು. ನಂತರ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್ನಲ್ಲಿ ಮನೆಯ ಸ್ಥಳವನ್ನು ಗುರುತಿಸಬೇಕು. ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ದೊರೆಯುವ ಎಸ್ಇ ಐಡಿ (SE ID) ಅನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು. ಗಣತಿದಾರರು ಮನೆಗೆ ಭೇಟಿ ನೀಡಿದಾಗ ಈ ಎಸ್ಇ ಐಡಿ ನೀಡಬೇಕು ಎಂದು ಶಿಕ್ಷಕರಿಗೆ ವಿವರಿಸಲಾಯಿತು.
ತರಬೇತಿ ಕೇಂದ್ರದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಬಾವಿ, ಉಪತಹಶೀಲ್ದಾರ್ ವಿಜಯ್ ಚೌಗುಲೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾಗವಾಡ ತಾಲೂಕು ಅಧ್ಯಕ್ಷ ಎಸ್.ಎಸ್. ಭಾವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ಸಂಕಪಾಳ್, ಉಗಾರ್ ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಕೊಲ್ಲಾಪುರ, ಶೇಡಬಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಕಾಗವಾಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ತರಬೇತಿ ಕಾರ್ಯಕ್ರಮವು ಕಾಗವಾಡದಲ್ಲಿ ಎರಡು ಹಂತಗಳಲ್ಲಿ ನಡೆಯಲಿದ್ದು, ಪ್ರತಿಯೊಬ್ಬ ಶಿಕ್ಷಕರು ಬೆಳಿಗ್ಗೆಯಿಂದ ಸಂಜೆಯವರೆಗೆ ಕಡ್ಡಾಯವಾಗಿ ಹಾಜರಿದ್ದು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
