ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾವಣಗೆರೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಖಜಾನೆ ಸುಭದ್ರವಾಗಿದ್ದು, ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕರ್ನಾಟಕದ ಹಣಕಾಸಿನ ಪರಿಸ್ಥಿತಿ ಸುಭದ್ರವಾಗಿದೆ. ಬಿಜೆಪಿಯವರು ಹೇಳುತ್ತಿರುವುದು ಶುದ್ಧ ಸುಳ್ಳು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಡಿಮೆಯಿದ್ದ ಗ್ಯಾಸ್ ಮತ್ತು ಪೆಟ್ರೋಲ್ ಡಿಸೇಲ್ ಬೆಲೆಗಳು ಮೋದಿ ಸರ್ಕಾರದಲ್ಲಿ ಹೆಚ್ಚಿಸಲಾಗಿದೆ. ರಾಜಕೀಯವಾಗಿ ಮಾಡುವ ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕಲು ಬರುತ್ತಾರೆ. ಪಕ್ಕದ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿ ತೈಲ್ ಬೆಲೆ ಕಡಿಮೆಯಾಗಿದೆ. 15 ಲಕ್ಷ ರೂಪಾಯಿ ಪ್ರತಿ ಕುಟುಂಬಕ್ಕೆ ನೀಡುತ್ತೇವೆ ಎಂದಿದ್ದರೂ ಕೊಟ್ರಾ? 2 ಕೋಟಿ ಉದ್ಯೋಗ ಕೊಡ್ತಿನಿ ಎಂದಿದ್ರೂ ಕೊಟ್ರಾ? 4 ವರ್ಷ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ದಾವಣಗೆರೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರ ಎಂ,ಪಿ. ಪುತ್ರನಿಗೆ ಎಂ.ಎಲ್.ಎ ಟಿಕೇಟ್ ನೀಡಿದ ಬಗ್ಗೆ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ಸಿನಿಂದ ಹೋದವರನ್ನು ಸಿಎಂ ಮಾಡಿದ್ದಾರೆ ಎಂದು ಅಸ್ಸಾಂ ಸಿಎಂ ಬಗ್ಗೆ ಉಲ್ಲೇಖಿಸಿದ ಸಿಎಂ, ಯಡಿಯೂರಪ್ಪ, ಅವರ ಮಕ್ಕಳು, ದೇವೆಗೌಡ ಅವರ ಮಕ್ಕಳು ಎಲ್ಲರೂ ರಾಜಕೀಯದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.
