ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.


ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು. ಕ್ಷುಲ್ಲಕ ವಿಚಾರವನ್ನು ದಿನವಿಡೀ ತೋರಿಸುವವರು ಅದರ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಗಂಡ ಹೆಂಡತಿ ಜಗಳವನ್ನು ಇಡೀ ದಿನ ತೋರಿಸಿದರೆ ಅದರಿಂದ ಸಮಾಜಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು.ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ. ಮುಂದುವರೆಯಲಿ ಎನ್ನುವುದು ಪಟ್ಟಭದ್ರರ ಹಿತಾಸಕ್ತಿಯಾಗಿದೆ ಎಂದರು. ಬಸವಣ್ಣ ತಿರಸ್ಕರಿದ್ದ ಕರ್ಮಸಿದ್ಧಾಂತವನ್ನು ಪಾಲಿಸುವವರು ಈಗ ಹೆಚ್ಚಾಗಿದ್ದಾರೆ. ಈ ಮೌಡ್ಯ ಆಚರಿಸುವವರೆಲ್ಲಾ ವಿದ್ಯಾವಂತರೇ ಎನ್ನುವುದು ಬೇಸರದ ಸಂಗತಿ ಎಂದರು. ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013 ರಲ್ಲೂ ಮಾಡಿತ್ತು. ಈಗಲೂ ಮುಂದುವರೆಸಿದ್ದೇವೆ. ನಾವು ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನು ಪಾಲುಸುತ್ತಿದ್ದೇವೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕುಎಂದರು.

ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ, ಸಚಿವರುಗಳಾದ ರಹೀಂ ಖಾನ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ಆನಂದ್ ದೇವಪ್ಪ, ಸಮ್ಮೇಳನದ ಪ್ರಧಾನ ಭಾಷಣಕಾರರಾಗಿರುವ ಹಿರಿಯ ಸಂಪಾದಕರಾದ ವಿಶ್ವೇಶ್ವರ ಭಟ್, ಸಂಸದರಾದ ಸಾಗರ್ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

