ಬಾಗಲಕೋಟೆ ಉಪಚುನಾವಣೆಯ ಕಣದಲ್ಲಿ ಮತಬೇಟೆ ಜೋರಾಗಿದೆ. ಆದರೆ ಕಾಂಗ್ರೆಸ್ ಪ್ರಚಾರದ ವೇಳೆ ಕಾಣಿಸಿಕೊಂಡ ದೃಶ್ಯ ಮಾತ್ರ ಎಲ್ಲರ ಕಣ್ಣನ್ನು ತೇವಗೊಳಿಸಿದೆ. ಶಿವಜಯಂತಿ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ಹಿಂದೂ ಕಾರ್ಯಕರ್ತನ ತಾಯಿ, ನಾಯಕರ ಮುಂದೆ ಕಣ್ಣೀರಿಡುತ್ತಾ ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ.

ಬಾಗಲಕೋಟೆಯ ಉಪಚುನಾವಣಾ ಪ್ರಚಾರ ಕಣದಲ್ಲಿ ಇಂದು ತಾಯಿಯೊಬ್ಬರ ಆಕ್ರಂದನ ಮುಗಿಲುಮುಟ್ಟಿತ್ತು. ಶಿವಜಯಂತಿ ಮೆರವಣಿಗೆಯ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತನಾಗಿರುವ ಹಿಂದೂ ಕಾರ್ಯಕರ್ತ ಶಿವು ಅಂಬಿಗೇರ (25) ಎಂಬುವವರ ತಾಯಿ, ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿದ್ದ ನಾಯಕರ ಮುಂದೆ ತಮ್ಮ ಅಳಲು ತೋಡಿಕೊಂಡರು. “ನನ್ನ ಮಗ ಏನೂ ತಪ್ಪು ಮಾಡಿಲ್ಲ, ಆದರೂ 45 ದಿನಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಬಿಪಿ, ಶುಗರ್ ಇರುವ ನಾನು ಎಲ್ಲರ ಕಾಲು ಹಿಡಿದು ಬೇಡಿಕೊಂಡರೂ ಯಾರೂ ಸ್ಪಂದಿಸುತ್ತಿಲ್ಲ. ಎಲೆಕ್ಷನ್ ಮುಗಿಯಲಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ” ಎಂದು ಕಣ್ಣೀರಿಟ್ಟರು. ಹಿಂದೂ ಹೆಸರಿನಲ್ಲಿ ರಾಜಕೀಯ ಮಾಡುವ ನಾಯಕರು ಅಮಾಯಕರು ಜೈಲು ಪಾಲಾದಾಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ ಮಹಿಳೆಯ ಆಕ್ರೋಶ , ಪ್ರಚಾರಕ್ಕೆ ಬಂದಿದ್ದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿತು.
