ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ವಿವಿಧ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಸುಮಾರು 18 ಲಕ್ಷಕ್ಕೂ ಅಧಿಕ ಮೌಲ್ಯದ 27 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.

ಕಳೆದ ಮಾರ್ಚ್ 31ರಂದು ಅಜೀತ ಸುಭಾಷ ಅರಬೋಳೆ ಎಂಬುವವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಸಂಕೇಶ್ವರ ಪೊಲೀಸರು, ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಜೈಲಿಗಟ್ಟಿದ್ದಾರೆ. ಬಂಧಿತರನ್ನು ಗೋಕಾಕ ತಾಲ್ಲೂಕಿನ ಅಂಕಲಗಿಯ ಲಕ್ಷ್ಮಣ ವಿರುಪಾಕ್ಷಿ ಕಣಬರಗಿ ಹಾಗೂ ಯರಗಟ್ಟಿ ತಾಲ್ಲೂಕಿನ ಬೋಳಕಡಬಿಯ ಫಕೀರಪ್ಪಾ ಸಿದ್ದಪ್ಪಾ ಕರಿಗಾರ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಸಂಕೇಶ್ವರ ಮಾತ್ರವಲ್ಲದೆ ಬೆಳಗಾವಿ ನಗರದ ಹಿರೇಬಾಗೇವಾಡಿ, ಎಪಿಎಂಸಿ, ಶಹಾಪುರ, ಮಾಳಮಾರುತಿ, ಮಾರ್ಕೆಟ್, ಕಾಕತಿ, ಖಡೇಬಜಾರ, ಗ್ರಾಮೀಣ ಠಾಣೆ ಸೇರಿದಂತೆ ಮಹಾರಾಷ್ಟ್ರದ ಚಂದಗಡ ವ್ಯಾಪ್ತಿಯಲ್ಲೂ ಬೈಕ್ ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಒಟ್ಟು 18,30,000 ರೂಪಾಯಿ ಮೌಲ್ಯದ 27 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಹಾಗೂ ಗೋಕಾಕ ಡಿಎಸ್‌ಪಿ ರವಿ ಡಿ. ನಾಯ್ಕ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಸಂಕೇಶ್ವರ ಪಿಐ ಎಸ್.ಎಮ್. ಅವಜಿ, ಪಿಎಸ್‌ಐಗಳಾದ ಯು.ಎಸ್. ಶೆಟ್ಟೆನ್ನವರ, ವಿಠಲ ನಾಯಿಕ, ಎಎಸ್‌ಐ ಎಲ್.ಎಸ್. ಖೋತ ಹಾಗೂ ಸಿಬ್ಬಂದಿಗಳಾದ ಎಸ್.ಎಲ್. ಗಳತಗಿ, ವಿ.ಬಿ. ಮುರ್ಕಿಭಾವಿ, ಎಸ್.ಎಮ್. ಯಕ್ಸಂಬಿ, ಕೆ.ಡಿ. ಹಿರೇಮಠ, ಎಸ್.ಬಿ. ಪೂಜೇರಿ, ಎಸ್.ಎಸ್. ಕುದರೆ, ವಿ.ಜಿ. ಕುಡ್ಡಗೋಳ, ಬಿ.ಟಿ. ಪಾಟೀಲ, ಎಮ್.ಕೆ. ಅತ್ತಾರ, ಎಸ್.ಕೆ. ಹೊಸೂರ, ಎಸ್.ಬಿ. ಮತಪತಿ ಮತ್ತು ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ, ಸಚೀನ ಪಾಟೀಲ ಅವರನ್ನೊಳಗೊಂಡ ತಂಡ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿತ್ತು. ಈ ತಂಡದ ಸಮಯಪ್ರಜ್ಞೆ ಮತ್ತು ಶ್ರಮವನ್ನು ಎಸ್ಪಿ ಸಾಹೇಬರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
